

ಬೀಜಿಂಗ್: 2008ರ ಮುಂಬೈ ದಾಳಿ ರೂವಾರಿ ಜಾಕಿ ಉರ್ ರಹಮಾನ್ ಲಖ್ವಿ ಬಿಡುಗಡೆ ಸಂಬಂಧ ಪಾಕಿಸ್ತಾನದ ವಿರುದ್ಧ ಕ್ರಮ ಜರುಗಿಸುವ ಭಾರತದ ಪ್ರಯತ್ನಕ್ಕೆ ವಿಶ್ವಸಂಸ್ಥೆಯಲ್ಲಿ ತಡೆಯೊಡ್ಡಿದ ಚೀನಾ ತನ್ನ ನಿರ್ಧಾರವನ್ನು ಮತ್ತೆ ಸಮರ್ಥಿಸಿಕೊಂಡಿದೆ.
ಲಖ್ವಿಯನ್ನು ಬಿಡುಗಡೆ ಮಾಡಿದ ಪಾಕಿಸ್ತಾನದ ವಿರುದ್ಧ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಭಾರತದ ಪ್ರಯತ್ನಕ್ಕೆ ವಿಶ್ವಸಂಸ್ಥೆಯಲ್ಲಿ ಚೀನಾ ತಡೆಯೊಡ್ಡಿತ್ತು. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ಬಲವಾಗಿ ಆಕ್ಷೇಪವೆತ್ತಿದ ಬಳಿಕ ಚೀನಾದಿಂದ ಪ್ರತಿಕ್ರಿಯೆ ಬಂದಿದ್ದು, ನಮ್ಮ ನಿರ್ಧಾರವು ಸತ್ಯಾಂಶಗಳ ಆಧಾರದಲ್ಲಿ, ವಸ್ತುನಿಷ್ಠವಾಗಿ ಮತ್ತು ನ್ಯಾಯೋಚಿತವಾಗಿತ್ತು ಎಂದು ಬೀಜಿಂಗ್ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಸದಸ್ಯನಾಗಿ, ಸತ್ಯಾಂಶಗಳ ಆಧಾರದಲ್ಲಿಯೇ ಚೀನಾ ಯಾವತ್ತೂ ಕೆಲಸ ಮಾಡುತ್ತಿದೆ" ಎಂದು ವಿದೇಶಾಂಗ ವಕ್ತಾರೆ ಹುವಾ ಚುನ್ಯಿಂಗ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.