

ನವದೆಹಲಿ: ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ ಅವರ ಭಾರತ ಪ್ರವಾಸ ವೇಳಾಪಟ್ಟಿ ಸಿದ್ಧಗೊಂಡಿದ್ದು, 6 ದಿನಗಳ ಪ್ರವಾಸ ನಿಮಿತ್ತ ಇದೇ ಫೆಬ್ರವರಿ 19ರಂದು ಒಲಿ ಅವರು ಭಾರತಕ್ಕೆ ಆಗಮಿಸಲಿದ್ದಾರೆ.
ನೇಪಾಳದಲ್ಲಿ ನೂತನ ಸಂವಿಧಾನ ಅಂಗೀಕಾರಗೊಂಡ ಬಳಿಕ ಅಂದರೆ ಕಳೆದ ಅಕ್ಟೋಬರ್ ತಿಂಗಳಿನಿಂದ ಇದೇ ಮೊದಲ ಬಾರಿಗೆ ಆ ದೇಶ ಪ್ರಧಾನಿ ವಿದೇಶ ಪ್ರವಾಸ ಕೊಗೊಂಡಿದ್ದು, ಗುರುವಾರ ರಾತ್ರಿ ನಡೆದ ನೇಪಾಳ ಸಚಿವ ಸಂಪುಟ ಸಭೆ ಪ್ರವಾಸದ ವೇಳಾಪಟ್ಟೆಯನ್ನು ಅಂತಿಮಗೊಳಿಸಿದೆ. ಅಲ್ಲದೆ ಪ್ರವಾಸ ವೇಳೆಯಲ್ಲಿ ಚರ್ಚಿಸಬೇಕಾದ ಅಂಶಗಳು ಮತ್ತು ಪ್ರವಾಸದ ಉದ್ದೇಶಗಳನ್ನು ಕೂಡ ಅಂತಿಮಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ನೇಪಾಳ ಸರ್ಕಾರದ ವಕ್ತಾರ ಷೇರ್ ಧನ ರಾಯ್ ಅವರು, ಇದೊಂದು ಅಭಿಮಾನದ ಭೇಟಿಯಾಗಿದೆ. ಉಭಯ ದೇಶಗಳ ನಡುವಿನ ಸೌಹಾರ್ಧತೆಯನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಈ ಭೇಟಿ ಪ್ರಮುಖವಾಗಿದೆ. ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ ಅವರ ಭಾರತ ಪ್ರವಾಸ ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಸಾಕಾರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನೇಪಾಳ ಪ್ರಧಾನಿ ಒಲಿ ಅವರು ಭಾರತ ಪ್ರವಾಸದ ವೇಳೆ ಪ್ರಮುಖವಾಗಿ ಇಂಧನ ಸಮಸ್ಯೆ ಕುರಿತಂತೆ ಭಾರತ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ನೇಪಾಳದಲ್ಲಿ ನೂತನ ಸಂವಿಧಾನವನ್ನು ಅಂಗೀಕರಿಸಿದ ಬಳಿಕ ಮಾದೇಸಿ ಸಮುದಾಯದ ತೀವ್ರ ಪ್ರತಿಭಟನೆಗಳಾಗಿತ್ತು. ಈ ಸಂದರ್ಭದಲ್ಲಿ ಇಂಡೋ-ನೇಪಾಳ ಗಡಿ ಮಾರ್ಗ ಪ್ರತಿಭಟನಾಕಾರರ ದಾಳಿ ತುತ್ತಾಗಿತ್ತು. ಹೀಗಾಗಿ ಉಭಯ ದೇಶಗಳ ನಡುವಿನ ವಾಣಿಜ್ಯಾತ್ಮಕ ವ್ಯಾಪರಕ್ಕೆ ಧಕ್ಕೆಯಾಗಿತ್ತು. ಈ ಬೆಳವಣಿಗೆ ಬಳಿಕ ಉಭಯ ದೇಶಗಳ ನಡುವಿನ ಸಂಬಂಧ ಕೂಡ ತೀರಾ ಹಳಸಿತ್ತು. ಪ್ರಸ್ತುತ ನೇಪಾಳ ಸಂವಿಧಾನಕ್ಕೆ ಹೊಸ ತಿದ್ದುಪಡಿ ಮಾಡಲಾಗಿದ್ದು, ನೇಪಾಳದಲ್ಲಿ ಪ್ರಸ್ತುತ ಪರಿಸ್ಥಿತಿ ಸುಧಾರಿಸಿದೆ.
ಹೀಗಾಗಿ ನೇಪಾಳ ಸಚಿವ ಸಂಪುಟ ಕೂಡ ಭಾರತದೊಂದಿಗಿನ ಹಳಸಿರುವ ಸಂಬಂಧಕ್ಕೆ ಪುನಶ್ಚೇತನ ನೀಡಲು ಮುಂದಾಗಿದ್ದು, ಇದೇ ಕಾರಣಕ್ಕೆ ಪ್ರಧಾನಿ ಕೆಪಿ ಶರ್ಮಾ ಒಲಿ ಅವರನ್ನು ಭಾರತ ಪ್ರವಾಸಕ್ಕೆ ಕಳುಹಿಸಲಿದೆ.