

ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ ಅವರ ನವ ಭಾರತ ದೂರ ದೃಷ್ಟಿಗೆ ಅಮೆರಿಕ ಮೆಚ್ಚುಗೆ ಸೂಚಿಸಿದ್ದು, ಭಾರತದ ದೂರದೃಷ್ಟಿಯಿಂದಾಗಿ ಅಮೆರಿಕನ್ನರಿಗೂ ಉದ್ಯೋಗಾವಕಾಶಗಳು ಸಿಗುತ್ತವೆ ಎಂದು ಹೇಳಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಪ್ರವಾಸದ ಹಿನ್ನಲೆಯಲ್ಲಿ ಮಾತನಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಾಧ್ಯಮ ಕಾರ್ಯದರ್ಶಿ ಸೀನ್ ಸ್ಪಿಸರ್ ಅವರು, ನರೇಂದ್ರ ಮೋದಿ ಅವರನ್ನು ಶ್ವೇತ ಭವನಕ್ಕೆ ಆಹ್ವಾನಿಸಲು ನಾವು ಉತ್ಸುಕರಾಗಿದ್ದೇವೆ. ಅವರ ನವ ಭಾರತ ಪರಿಕಲ್ಪನೆ ಉತ್ತಮವಾಗಿದ್ದು, ಇದರಿಂದಾಗಿ ಭಾರತೀಯರಿಗೆ ಮಾತ್ರವಲ್ಲದೇ ಸಾಕಷ್ಟು ಅಮೆರಿಕನ್ನರಿಗೂ ಉದ್ಯೋಗಾವಕಾಶಗಳು ಸಿಗುತ್ತವೆ ಎಂದು ಹೇಳಿದ್ದಾರೆ.
ಇದೇ ಜೂನ್ 26ರಂದು ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಪ್ರವಾಸ ಕೈಗೊಳ್ಳುತ್ತಿದ್ದು, ಈ ಬಗ್ಗೆ ಸ್ಪಿಸರ್ ಮಾಧ್ಯಮಗಳಿದೆ ಮಾಹಿತಿ ನೀಡಿದರು. "ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಮೆರಿಕ ವಸ್ತುಗಳನ್ನು ಕೊಳ್ಳಿರಿ, ಅಮೆರಿಕನ್ನರಿಗೆ ಕೆಲಸ ನೀಡಿ ಎಂಬ ನೀತಿ ಭಾರತಕ್ಕೆ ಸ್ಪೂರ್ತಿಯಾಗಿದ್ದು, ನೈಸರ್ಗಿಕ ಅನಿಲ ಸೇರಿದಂತೆ ಅಮೆರಿಕದ ಇಂಧನ ಶಕ್ತಿ ಮತ್ತು ತಂತ್ರಜ್ಞಾನಗಳು ಪ್ರಧಾನಿ ನರೇಂದ್ರ ಮೋದಿ ಅವರ ನವ ಭಾರತ ಸೃಷ್ಟಿ ದೂರದೃಷ್ಟಿಗೆ ಪೂರಕವಾಗಿವೆ. ಈ ಪ್ರಕ್ರಿಯೆಲ್ಲಿ ಸಾವಿರಾರು ಅಮೆರಿಕನ್ನರಿಗೂ ಕೂಡ ಕೆಲಸ ದೊರೆಯುವಂತಾಗುತ್ತದೆ ಎಂದು ಸ್ಪಿಸರ್ ಆಶಯ ವ್ಯಕ್ತಪಡಿಸಿದರು.
ಇದೇ ವೇಳೆ ಭಾರತ ಮತ್ತು ಅಮೆರಿಕ ನಡುವಿನ ವಾಣಿಜ್ಯ ಸಂಬಂಧ ಸುಧಾರಣೆ ಕುರಿತು ಮಾತನಾಡಿದ ಸ್ಪಿಸರ್, 2000ನೇ ಇಸವಿಯಿಂದೀಚೆಗೆ ಭಾರತ ಮತ್ತು ಅಮೆರಿಕ ನಡುವಿನ ವಾಣಿಜ್ಯ ಸಂಬಂಧ ಆರು ಪಟ್ಟು ಹೆಚ್ಚಳವಾಗಿದೆ. 19 ಬಿಲಿಯನ್ ಡಾಲರ್ ನಷ್ಟಿದ್ದ ವಾಣಿಜ್ಯ ಒಪ್ಪಂದ ಇದೀಗ 115 ಬಿಲಿಯನ್ ಗಳಿಗೇರಿದೆ. ಅಂತೆಯೇ ಭಾರತದ ಆರ್ಥಿಕತೆ ಕೂಡ ಶೇ.7ರಷ್ಚು ಅಭಿವೃದ್ದಿ ಕಂಡಿದೆ. ಉಭಯ ದೇಶಗಳ ಸುಮಾರು 1.6 ಬಿಲಿಯನ್ ನಾಗರಿಕರಿಗೆ ಅನುಕೂಲವಾಗುವಂತೆ ಭಾರತ ಮತ್ತು ಅಮೆರಿಕ ದೇಶಗಳು ವಾಣಿಜ್ಯ ಒಪ್ಪಂದ ಮಾಡಿಕೊಳ್ಳಲ್ಲಿದ್ದೇವೆ ಎಂದು ಹೇಳಿದ್ದಾರೆ.