ವಿಶೇಷ

ಯಾವ ಜೀವವೂ ಪುಟ್ಟದಲ್ಲ: ಲಿಫ್ಟ್ ಸಂಧಿಯಲ್ಲಿ ಸಿಲುಕಿಕೊಂಡ ಹಕ್ಕಿ ಮರಿ; ಅಗ್ನಿಶಾಮಕ ದಳ ಕಾರ್ಯಾಚರಣೆ

Harshavardhan M

ಕಾಸರಗೋಡು: ಯಾವುದೇ ಒಂದು ಜೀವ ಪುಟ್ಟದಲ್ಲ ಎನ್ನುವುದಕ್ಕೆ ನಿದರ್ಶನವೆಂಬಂತೆ ಕಾಸರಗೋಡಿನಲ್ಲಿ ನಡೆದ ಘಟನೆ ಸಾಕ್ಷಿಯಾಗಿದೆ. ಘಟನೆ ನಡೆದ ಸ್ಥಳ ಸೆಂಟ್ರಲ್ ಯೂನಿವರ್ಸಿಟಿ.

ಆ ಯೂನಿವರ್ಸಿಟಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಭೇಟಿ ನೀಡಲಿದ್ದರು. ಹೀಗಾಗಿ ಪೊಲೀಸರು ಕಟ್ಟಡವನ್ನು ಪಹರೆ ಕಾಯುತ್ತಿದ್ದರು. ಈ ಸಂದರ್ಭ ತಾಯಿ ಹಕ್ಕಿಯೊಂದು ಪೊಲೀಸ್ ಪೇದೆಯೊಬ್ಬರ ಸುತ್ತ ಹಾರಾಡುತ್ತಾ ಅವರ ಗಮನ ಸೆಳೆಯಲು ಯತ್ನಿಸುತ್ತಿತ್ತು. ಈ ವಿಚಾರವನ್ನು ಪೇದೆ ಉಪನ್ಯಾಸಕಿ ಆಶಾಲಕ್ಷ್ಮಿ ಅವರ ಗಮನಕ್ಕೆ ತಂದಿದ್ದರು. 

ಆಶಾಲಕ್ಷ್ಮಿ ಅವರಿಗೆ ಯೂನಿವರ್ಸಿಟಿ ಕಟ್ಟಡದಲ್ಲಿ ಗೂಡು ಮಾಡಿಕೊಂಡಿದ್ದ ಹಕ್ಕಿಗಳ ಪರಿಚಯವಿತ್ತು. ಈ ಹಿಂದೆ ಹಲವು ಬಾರಿ ಆ ಹಕ್ಕಿಗಳನ್ನು ಗಮನಿಸಿ ಅವುಗಳ ಆಟ ಕಂಡು ಹರ್ಷಿಸಿದ್ದರು ಕೂಡಾ.

ಹಕ್ಕಿಯ ಚೀರಾಟ ಕಂಡು ಆಶಾಲಕ್ಷ್ಮಿ ಪರಿಶೀಲಿಸಿದಾಗ ಆ ಹಕ್ಕಿ ಮರಿ ಲಿಫ್ಟ್ ನಲ್ಲಿ ಸಿಲುಕಿಕೊಂಡಿರುವುದು ತಿಳಿದುಬಂದಿತ್ತು. ಒಡನೆಯೇ ಅವರು ರಕ್ಷಣಾ ಅಧಿಕಾರಿಗಳಿಗೆ ಕರೆ ಮಾಡಲು ಮುಂದಾದರು. ಆದರೆ ಕೇವಲ ಹಕ್ಕಿಯನ್ನು ರಕ್ಷಿಸಲು ಅವರು ಬರುವರೇ ಎನ್ನುವ ಆತಂಕ ಅವರಿಗಿತ್ತು.

ಅವರ ಅಚ್ಚರಿಗೆ ಅಗ್ನಿ ಶಾಮಕ ದಳ ಸಿಬ್ಬಂದಿ ಮತ್ತು ರಕ್ಷಣಾ ಕಾರ್ಯಾಚರಣೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದರು. ಕೆಲ ಗಂಟೆಗಳ ಪರಿಶ್ರಮದ ನಂತರ ಅವರು ಹಕ್ಕಿ ಮರಿಯನ್ನು ರಕ್ಷಿಸುವಲ್ಲಿ ಸಫಲರಾದರು.

SCROLL FOR NEXT