ವಿಶೇಷ

ಕೇರಳದ ಅತ್ಯಂತ ಹಿರಿಯ ಸಿಂಹಕ್ಕೆ ಮೃಗಾಲಯದಲ್ಲಿ ರಾಜಾತಿಥ್ಯ: ಮೂರು ವರ್ಷಗಳ ಹಿಂದೆ ಪ್ಯಾರಾಲಿಸಿಸ್

Harshavardhan M

ತಿರುವನಂತಪುರಂ: ಕೇರಳ ರಾಜ್ಯದಲ್ಲೇ ಅತಿ ಹಿರಿಯ ಸಿಂಹ ಎನ್ನುವ ಕೀರ್ತಿ 'ಆಯುಷ್' ಎಂಬ ಸಿಂಹದ್ದು. ತಿರುವನಂತಪುರಂನ ಮೃಗಾಲಯ ಅದರ ವಾಸಸ್ಥಾನ. ಅದರ ವಯಸ್ಸು 18.

ಇತ್ತೀಚಿನ ದಿನಗಳಲ್ಲಿ ಮೃಗಾಲಯದಲ್ಲಿ ಸಾರ್ವಜನಿಕರಿಗೆ ಸಿಂಹ ದರ್ಶನ ನೀಡುತ್ತಿಲ್ಲ. ಅದಕ್ಕೆ ಕಾರಣ ಅದರ ವಯಸ್ಸು. ಅಲ್ಲದೆ, ಇನ್ನೊಂದು ಕಾರಣವೆಂದರೆ ಆಯುಷ್ ಸಿಂಹಕ್ಕೆ ಮೃಗಾಲಯ ಸಿಬ್ಬಂದಿ ಬೇರೆಡೆ ರಾಜಾತಿಥ್ಯ ಒದಗಿಸುತ್ತಿದ್ದಾರೆ. 

ಬೆಳಿಗ್ಗೆ ಬ್ರೇಕ್ ಫಾಸ್ಟ್ ಸೇವನೆ ನಂತರ ಆಯುಷ್ ಸಿಂಹ ನಿದ್ದೆಗೆ ಶರಣಾಗುತ್ತದೆ. ಆತ ಕ್ರಿಯಾಶೀಲನಾಗುವುದು ರಾತ್ರಿಯ ಹೊತ್ತಿನಲ್ಲಿ. ಕಳೆದ 2 ವರ್ಷಗಳಿಂದ ಆಯುಷ್ ಗೆ ವಿಶೇಷ ಟ್ರೀಟ್ಮೆಂಟ್ ನೀಡಲಾಗುತ್ತಿದೆ. 

ಮೃಗಾಲಯದ ವೈದ್ಯರಾದ ಜೇಕಬ್ ಅಲೆಕ್ಸಾಂಡರ್ ಅವರು ಬಂದರೆ ಆಯುಷ್ ಪ್ರತಿಕ್ರಿಯಿಸುತ್ತಾನೆ. ವೈದ್ಯರು ಆಯುಷ್ ಎಂದು ಕರೆದಾಗ ಗೋಡೆ ಬಳಿ ತಲೆಯನ್ನು ಉಜ್ಜುತ್ತದೆ. ಅದರರ್ಥ ತಾನು ಆರೋಗ್ಯವಾಗಿದ್ದೇನೆ ಎಂದು.

ಆಯುಷ್ ಹಿಂದೆ ತುಂಬಾ ಆಕ್ಟಿವ್ ಆಗಿದ್ದ. ಉಗ್ರ ಸ್ವಭಾವದವನೂ ಆಗಿದ್ದ. ಆದರೆ ಮೂರು ವರ್ಷಗಳ ಹಿಂದೆ ಪ್ಯಾರಾಲಿಸಿಸ್ ಆಗಿ ಒಂದೇ ಕಡೆ ಬಿದ್ದುಕೊಳ್ಳುವ ಪರಿಸ್ಥಿತಿ ಬಂದಿತ್ತು. ಅಯುಷ್ ನನ್ನು ನಡೆಯುವಂತೆ ಮಾಡಲು ಮೃಗಾಲಯದ ಸಿಬ್ಬಂದಿ ಎಷ್ಟೇ ಪ್ರಯತ್ನಿಸಿದರೂ ಆಗಿರಲಿಲ್ಲ. ಮಸಾಜ್, ಫಿಸಿಯೊಥೆರಪಿ ಸೇರಿದಂತೆ ಎಲ್ಲಾ ಬಗೆಯ ಪ್ರಯತ್ನಗಳೂ ನಿಷ್ಪ್ರಯೋಜಕವಾದವು.  

ಇಂದು ಆತನಿಗೆ ದಿನಕ್ಕೆ 6 ಕೆ.ಜಿ ಮಾಂಸ, ವಿಟಮಿನ್ ಮತ್ತಿತರ ಸಪ್ಲಿಮೆಂಟುಗಳನ್ನು ನೀಡಲಾಗುತ್ತಿದೆ. ಬೋರಾಗದಂತೆ ಮರದ ಚೆಂಡನ್ನು ಆತನಿಗೆ ನೀಡಲಾಗಿದೆ. ಆದರೆ ಆಯುಷ್ ಗೆ ಬಾಲ್ ಜೊತೆ ಆಟವಾಡಲು ಮನಸ್ಸೇ ಇಲ್ಲ ಎನ್ನುತ್ತಾರೆ ವೈದ್ಯರು.

SCROLL FOR NEXT