

ಐಸಿಸಿ U19 ವಿಶ್ವಕಪ್ ಫೈನಲ್‌ನಲ್ಲಿ ಇಂಗ್ಲೆಂಡ್ ಬೌಲರ್‌ಗಳ ಬೆವರಿಳಿಸಿ ಸುದ್ದಿಯಾಗಿದ್ದ 14 ವರ್ಷದ ವೈಭವ್ ಸೂರ್ಯವಂಶಿ ಇದೀಗ ತನ್ನ ಶಿಕ್ಷಣದತ್ತ ಗಮನ ಹರಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಐಸಿಸಿ ಅಂಡರ್-19 ವಿಶ್ವಕಪ್ 2026ರ ಫೈನಲ್‌ನಲ್ಲಿ ಅದ್ಭುತ 175 ರನ್‌ಗಳೊಂದಿಗೆ ತಂಡದ ಗೆಲುವಿಗೆ ಕಾರಣವಾದ ನಂತರ, 14 ವರ್ಷದ ಈ ಬಾಲಕ ಸ್ವಲ್ಪ ಸಮಯದವರೆಗೆ ಕ್ರಿಕೆಟ್‌ನಲ್ಲಿ ಕಾಣಿಸಿಕೊಳ್ಳುವುದಿಲ್ಲ. ಮುಂಬರುವ ಐಪಿಎಲ್ ಪಂದ್ಯಾವಳಿಗೂ ಮುನ್ನ ವೈಭವ್ ಫೆಬ್ರುವರಿ 17 ರಿಂದ ಪ್ರಾರಂಭವಾಗುವ ತನ್ನ 10ನೇ ತರಗತಿ ಬೋರ್ಡ್ ಪರೀಕ್ಷೆಗಳಿಗೆ ಹಾಜರಾಗಲಿದ್ದಾರೆ.
ಸಮಷ್ಟಿಪುರದ ಪೋದಾರ್ ಅಂತರರಾಷ್ಟ್ರೀಯ ಶಾಲೆಯ ಪ್ರಾಂಶುಪಾಲ ನೀಲ್ ಕಿಶೋರ್, ಯುವ ಕ್ರಿಕೆಟಿಗನಿಗೆ ಪ್ರವೇಶ ಪತ್ರ ದೊರೆತಿದ್ದು, ಇತರ ವಿದ್ಯಾರ್ಥಿಗಳಂತೆ ಪರೀಕ್ಷೆ ಬರೆಯಲಿದ್ದಾರೆ. ಅವರ ಆಗಮನದ ಬಗ್ಗೆ ಉತ್ಸಾಹವಿದ್ದರೂ, ಶಾಲೆಯು ಯಾವುದೇ ವಿಶೇಷ ಉಪಚಾರ ನೀಡುವುದಿಲ್ಲ. ಇದು ಶೈಕ್ಷಣಿಕ ಪಿಚ್ ಆಗಿದ್ದು, ಎಲ್ಲರೂ ಒಂದೇ ನಿಯಮಗಳ ಪ್ರಕಾರ ಆಡುತ್ತಾರೆ ಎಂದರು.
'ನಮ್ಮ ಶಾಲೆಯಲ್ಲಿ 10ನೇ ತರಗತಿಯ ಬೋರ್ಡ್ ಪರೀಕ್ಷೆಗೆ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಹಾಜರಾಗಲಿದ್ದಾರೆ. ಅವರಿಗೆ ಪ್ರವೇಶ ಪತ್ರ ತಲುಪಿದೆ. ಶಿಕ್ಷಕರು, ವಿದ್ಯಾರ್ಥಿಗಳು ಅಥವಾ ಪೋಷಕರು ಸೇರಿದಂತೆ ಎಲ್ಲರಲ್ಲೂ ಅವರ ಆಗಮನದ ಬಗ್ಗೆ ಉತ್ಸಾಹವಿದೆ. ಆದಾಗ್ಯೂ, ಅವರು ಇನ್ನೂ ವಿದ್ಯಾರ್ಥಿಯಾಗಿರುವುದರಿಂದ ಮತ್ತು ಅವರು ಪರೀಕ್ಷೆಗೆ ಹಾಜರಾಗುವುದರಿಂದ ನಾವು ಅದನ್ನು ಗಮನದಲ್ಲಿಟ್ಟುಕೊಂಡು ವ್ಯವಸ್ಥೆಗಳನ್ನು ಮಾಡಿದ್ದೇವೆ. ಇದು ಕ್ರಿಕೆಟ್ ಪಿಚ್ ಅಲ್ಲ, ಶೈಕ್ಷಣಿಕ ಪಿಚ್. ವಿದ್ಯಾರ್ಥಿಗಳು ಪರೀಕ್ಷೆಗಳನ್ನು ತೆಗೆದುಕೊಳ್ಳಲು ಯಾವುದೇ ತೊಂದರೆಯಾಗದಂತೆ ನಾವು ಖಚಿತಪಡಿಸಿಕೊಳ್ಳುತ್ತೇವೆ. ಎಲ್ಲ ಸೌಲಭ್ಯಗಳು, ಸುರಕ್ಷತೆ ಮತ್ತು ಭದ್ರತೆ ಎಲ್ಲರಿಗೂ ಒಂದೇ ಆಗಿರುತ್ತದೆ. ಫೆಬ್ರುವರಿ 17 ರಂದು ಪರೀಕ್ಷೆಗಳು ಪ್ರಾರಂಭವಾಗಲಿವೆ' ಎಂದು ನೀಲ್ ANI ಗೆ ತಿಳಿಸಿದರು.
ಕಳೆದ ಒಂದು ವರ್ಷದಲ್ಲಿ ವೈಭವ್ ಅವರ ಸಾಧನೆ ಗಮನಾರ್ಹವಾದುದು. ಚೆನ್ನೈನಲ್ಲಿ ಆಸ್ಟ್ರೇಲಿಯಾ U19 ತಂಡದ ವಿರುದ್ಧ 58 ಎಸೆತಗಳಲ್ಲಿ ಶತಕ ಸಿಡಿಸಿದ್ದರಿಂದ ಹಿಡಿದು ರಾಜಸ್ಥಾನ್ ರಾಯಲ್ಸ್ ತಂಡವು ಐಪಿಎಲ್‌ನಲ್ಲಿ ₹1.1 ಕೋಟಿಗೆ ಖರೀದಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆ ಬರೆದರು. ಐಪಿಎಲ್ 2025 ರಲ್ಲಿ, ಅವರು ಏಳು ಇನಿಂಗ್ಸ್‌ಗಳಲ್ಲಿ 200ಕ್ಕಿಂತ ಹೆಚ್ಚಿನ ಸ್ಟ್ರೈಕ್ ರೇಟ್‌ನಲ್ಲಿ 252 ರನ್ ಗಳಿಸಿದರು. ಇದರಲ್ಲಿ ಭಾರತೀಯನಿಂದ ಅತ್ಯಂತ ವೇಗದ ಐಪಿಎಲ್ ಶತಕದ ದಾಖಲೆಯೂ ಸೇರಿದೆ. ಅವರ ನಿರ್ಭೀತ ಬ್ಯಾಟಿಂಗ್‌ನಿಂದಾಗಿ ವೈಭವ್ ಎಲ್ಲರ ಗಮನ ಸೆಳೆದಿದ್ದಾರೆ.
ಇತ್ತೀಚೆಗೆ ಮುಕ್ತಾಯಗೊಂಡ ಅಂಡರ್-19 ವಿಶ್ವಕಪ್ ಅವರ ಕಿರೀಟಕ್ಕೆ ಮತ್ತೊಂದು ಗರಿಯನ್ನು ಸೇರಿಸಿತು. ಫೈನಲ್‌ನಲ್ಲಿ ಅವರ 175 ರನ್‌ಗಳು 15 ಬೌಂಡರಿಗಳು ಮತ್ತು 15 ಸಿಕ್ಸರ್‌ಗಳನ್ನು ಒಳಗೊಂಡಿದ್ದವು. ಅವರು ಪಂದ್ಯಾವಳಿಯನ್ನು 60ಕ್ಕಿಂತ ಹೆಚ್ಚಿನ ಸರಾಸರಿಯಲ್ಲಿ 439 ರನ್‌ಗಳೊಂದಿಗೆ ಕೊನೆಗೊಳಿಸಿದರು. ಇಂಗ್ಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಅವರು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು ಮತ್ತು ಟೂರ್ನಮೆಂಟ್‌ನ ಆಟಗಾರ ಗೌರವವನ್ನು ಸಹ ಪಡೆದರು. ಅವರು ಈ ಪಂದ್ಯದಲ್ಲಿ ದಾಖಲೆಯ 30 ಸಿಕ್ಸರ್‌ಗಳನ್ನು ಬಾರಿಸಿದರು. ಇದು ಅಂಡರ್-19 ವಿಶ್ವಕಪ್ ಇತಿಹಾಸದಲ್ಲಿ ಒಬ್ಬ ಆಟಗಾರನಿಂದ ಬಂದ ಅತಿ ಹೆಚ್ಚು ಸಿಕ್ಸರ್‌ಗಳಾಗಿವೆ.
Advertisement