

ಬೆಂಗಳೂರು: ಬೆಂಗಳೂರು ನಗರ ಸೇರಿದಂತೆ ರಾಜ್ಯದ ಪೊಲೀಸ್ ಠಾಣೆಗಳಲ್ಲಿ ಹೆಚ್ಚಾಗುತ್ತಿರುವ ಪ್ರಕರಣಗಳು ಮತ್ತು ಸಿಬ್ಬಂದಿ ಕೊರತೆ ಸಮಸ್ಯೆ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಹೈಕೋರ್ಟ್, ಈ ವಿಷಯವನ್ನು ಗೃಹ ಸಚಿವರು ಗಂಭೀರವಾಗಿ ಪರಿಗಣಿಸಿ ಪ್ರತಿ ಪೊಲೀಸ್ ಠಾಣೆಯಲ್ಲಿ ಯಾವ ವಿಭಾಗಕ್ಕೆ ಎಷ್ಟು ಸಿಬ್ಬಂದಿ ನಿಯೋಜನೆ ಮಾಡಬೇಕು ಎಂಬುದರ ಬಗ್ಗೆ ತಜ್ಞರ ಸಮಿತಿ ರಚಿಸುವ ಮೂಲಕ ವೈಜ್ಞಾನಿಕವಾಗಿ ಚಿಂತಿಸಬೇಕು ಎಂದಿದೆ.
ಅಪ್ರಾಪ್ತರನ್ನು ಕೂಲಿ ಕೆಲಸಕ್ಕೆ ನಿಯೋಜನೆ ಮಾಡಿರುವ ಆರೋಪಿಗಳಿಬ್ಬರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾ.ಚಂದ್ರಶೇಖರ್ ಅವರಿದ್ದ ನ್ಯಾಯಪೀಠ, ಬೇಗ ಹೆಚ್ಚಿನ ಪ್ರಮಾಣದಲ್ಲಿ ಠಾಣೆಗಳನ್ನು ಸ್ಥಾಪನೆ ಮಾಡುವಂತೆ ಗೃಹ ಇಲಾಖೆಗೆ ಸೂಚಿಸಿದೆ.
ಬೆಂಗಳೂರಿನಂತಹ ನಗರದಲ್ಲಿ ಭಯೋತ್ಪಾದನೆ, ಪಾಸ್‍ಪೋರ್ಟ್ ದುರುಪಯೋಗ, ಡ್ರಗ್ಸ್ ಮಾರಾಟ, ವಿದೇಶಿ ವಿದ್ಯಾರ್ಥಿಗಳ ರಕ್ಷಣೆ, ಮಕ್ಕಳು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಪೊಲೀಸ್ ಅಧಿಕಾರಿಗಳು ತಮ್ಮ ವ್ಯಾಪ್ತಿ ಮೀರಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದ್ದರಿಂದ ಸಂಬಂಧಪಟ್ಟ ಪ್ರಾಧಿಕಾರಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಠಾಣೆಗಳ ವ್ಯಾಪ್ತಿಯನ್ನು ಪುನರ್ ಪರಿಶೀಲಿಸಬೇಕು. ಅಲ್ಲದೆ, ಠಾಣೆಗಳಿಗೆ ಹೆಚ್ಚುವರಿ ಸಿಬ್ಬಂದಿ ನಿಯೋಜನೆಗೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದೆ.
ಬೆಂಗಳೂರು ನಗರವೊಂದರಲ್ಲಿ 2015ರ ಜನವರಿಯಿಂದ ಇಲ್ಲಿಯವರೆಗೂ ದಾಖಲಾಗಿರುವ ಪ್ರಕರಣಗಳನ್ನು ಅವಲೋಕಿಸಿದಲ್ಲಿ ತತ್‍ಕ್ಷಣ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಠಾಣೆಗಳನ್ನು ಸ್ಥಾಪಿಸಬೇಕಾದ ಅಗತ್ಯವಿದೆ. ಮಡಿವಾಳ ಪೊಲೀಸ್ ಠಾಣೆಯೊಂದನ್ನು ಉದಾಹರಿಸುವುದಾದರೆ ನವೆಂಬರ್ ಅಂತ್ಯದ ವೇಳೆಗೆ 2200 ಪ್ರಕರಣಗಳು ದಾಖಲಾಗಿದ್ದು, ಕೇವಲ 105 ಮಂದಿ ಸಿಬ್ಬಂದಿ ಮಂಜೂರು ಮಾಡಲಾಗಿದೆ. ಈ ಸಿಬ್ಬಂದಿ ಇಷ್ಟೊಂದು ಪ್ರಕರಣಗಳ ಬಗ್ಗೆ ತನಿಖೆ ನಡೆಸುವುದಕ್ಕೆ ಸಾಧ್ಯವೇ ಎಂದು ನ್ಯಾಯಪೀಠ ಪ್ರಶ್ನಿಸಿದೆ. ಅದೇ ರೀತಿಯಲ್ಲಿ ಎಚ್‍ಎಎಲ್, ಎಚ್‍ಎಸ್ ಆರ್ ಲೇಔಟ್ ಪೊಲೀಸ್ ಠಾಣೆಗಳಲ್ಲಿ 400ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.
ಅಪರಾಧ ಪ್ರಕರಣಗಳಲ್ಲಿ ತನಿಖೆಯ ಬುನಾದಿಯೇ ಪೊಲೀಸರ ಹೊರೆ ಎಂಬುದನ್ನು ಯಾವುದೇ ಕಾರಣಕ್ಕೂ ಮರೆಯಬಾರದು. ಈ ಪೊಲೀಸ್ ವ್ಯವಸ್ಥೆ ದುರ್ಬಲವಾದಲ್ಲಿ, ಇಡೀ ವ್ಯವಸ್ಥೆಗೆ ತೊಂದರೆಯಾಗಲಿದೆ. ಸಮಾಜದಲ್ಲಿ ಶಾಂತಿ ಕದಡುವುದಕ್ಕೆ ಕಾರಣವಾಗುತ್ತದೆ. ಈ ಅಂಶಗಳನ್ನು ಉಲ್ಲೇಖಿಸುತ್ತಿರುವುದು ಪೊಲೀಸ್ ಇಲಾಖೆಯ ಮೇಲೆ ರಾಜ್ಯದಲ್ಲಿ ವಿಶ್ವಾಸವನ್ನು ಹೆಚ್ಚಳ ಮಾಡುವುದಕ್ಕೆ ವಿನಃ, ಸರ್ಕಾರವನ್ನು ಆರೋಪಿಸಿವುದಕ್ಕಲ್ಲ ಎಂದು ನ್ಯಾಯಪೀಠ ಹೇಳಿದೆ. ಒಂದು ಠಾಣೆಯಲ್ಲಿ 90 ರಿಂದ 100 ಜನ ಪೊಲೀಸ್ ಸಿಬ್ಬಂದಿಯಿದ್ದರೂ, ವರ್ಷಕ್ಕೆ ದಾಖಲಾಗುವ 30 ಪ್ರಕರಣಗಳ ತನಿಖೆ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಆದರೆ, ವರ್ಷಕ್ಕೆ 300ಕ್ಕೂ ಹೆಚ್ಚು ಪ್ರಕರಣಗಳನ್ನು ವಿಚಾರಣೆ ಮಾಡುವ ಹಂತವನ್ನು ತಲುಪಿದ್ದಾರೆ.
ಹೀಗಾಗಿ ಗೃಹ ಇಲಾಖೆಯಲ್ಲಿ ದೀರ್ಘ ಕಾಲದಿಂದ ಖಾಲಿ ಇರುವ ಹುದ್ದೆಗಳನ್ನು ಕಾಲ ಕಾಲಕ್ಕೆ ತುಂಬದೆ ಇರುವುದು ಸಹ ಒಂದು ಕಾರಣವಾಗಿದೆ. ಸರ್ಕಾರ, ಗೃಹ ಇಲಾಖೆ ಕಾಲ ಕಾಲಕ್ಕೆ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಮತ್ತು ಪೇದೆಗಳನ್ನು ಪಾರದರ್ಶಕವಾಗಿ ನೇಮಕ ಮಾಡಬೇಕು ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.