

ಬೆಂಗಳೂರು: ದೇಶದ ಕೃಷಿ ಉತ್ಪನ್ನಗಳ ಪೈಕಿ ಪ್ರತಿವರ್ಷ ಶೇ.25 ರಷ್ಟನ್ನು ವಿದೇಶಕ್ಕೆ ರಫ್ತು ಮಾಡಿದರೆ ಕೃಷಿ ಕ್ಷೇತ್ರವನ್ನು ಲಾಭದತ್ತ ಕೊಂಡಯ್ಯಬಹುದು ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಅಲುಮ್ನಿ ಅಸೋಸಿಯೇಷನ್ ಅಧ್ಯಕ್ಷ ಡಾ.ಕೆ.ನಾರಾಯಣಗೌಡ ಅಭಿಪ್ರಾಯಪಟ್ಟರು.
ಕೃಷಿ ವಿಶ್ವವಿದ್ಯಾಲಯದ ಹಿರಿಯ ವಿದ್ಯಾರ್ಥಿಗಳ ಸಂಘ ಹೆಬ್ಬಾಳದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ದೇಶದಲ್ಲಿ ರೈತರು ಕೃಷಿಗಾಗಿ ಸಾವಿರಾರು ರುಪಾಯಿ ವ್ಯಯಿಸುತ್ತಾರೆ. ಆದರೆ ವೈಜ್ಞಾನಿಕ ಬೆಲೆ ಸಿಗದೆ ನಷ್ಟ ಅನುಭವಿಸುತ್ತಿದ್ದಾರೆ. ರೈತರ ಬೆಳೆಗಳನ್ನು ರಫ್ತು ಮಾಡಿದರೆ ರೈತರ ಜತೆಗೆ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬಹುದು ಎಂದು ತಿಳಿಸಿದರು.
ಪ್ರಶಸ್ತಿ ಪ್ರದಾನ
ಕೃಷಿಕ ತಿಮ್ಮಣ್ಣ ಹೆಗಡೆ ಅವರಿಗೆ ಎಸ್.ಎಂ.ನಾರಾಯಣ ರೆಡ್ಡಿ ಅತ್ಯುತ್ತಮ ಕೃಷಿ ವಿಜ್ಞಾನ ಪದವೀಧರ ರೈತ ಪ್ರಶಸ್ತಿ ಡಾ.ಬಿ.ನಾರಾಯಣಸ್ವಾಮಿ ಅವರಿಗೆ ಗಿರಿಯಪ್ಪಗೌಡ ಅತ್ಯುತ್ತಮ ವಿಸ್ತರಣಾ ಕಾರ್ಯಕರ್ತ ಪ್ರಶಸ್ತಿ ಕೊರಟಗೆರೆ ನಾರಾಯಣ ಅಯ್ಯಂಗಾರ್ ಜನಾರ್ದನ್ ಅವರಿಗೆ ಡಾ.ದ್ವಾರಕೀನಾಥ್ ಅತ್ಯುತ್ತಮ ವಿಸ್ತರಣಾ ಕಾರ್ಯಕರ್ತ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
ಸಾಧಕರಿಗೆ ಸನ್ಮಾನ
ಡಾ.ಮೃತ್ಯುಂಜಯ, ಡಾ.ಎಂ.ರಾಜಶೇಖರ್, ಡಾ.ಜಿ.ಕೆ.ವಸಂತ್ ಕುಮಾರ್, ಡಾ.ಟಿ.ಎಂ ಮಂಜುನಾಥ್, ಮಂಚೇಗೌಡ ಮತ್ತು ಕೃಶಿ ವಿವಿಯ ಪ್ರಾಧ್ಯಪಕ ಡಾ.ಎಲ್.ರಾಮಕೃಷ್ಣರಾವ್ ಅವರಿಗೆ ಹಿರಿಯ ವಿದ್ಯಾರ್ಥಿಗಳ ಸಂಘದಿಂದ ಸನ್ಮಾನ ಮಾಡಲಾಯಿತು.