

ಬೆಂಗಳೂರು: ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಶಿಕ್ಷಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಹೊರವಲಯ ಬ್ಯಾಡರಹಳ್ಳಿಯವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಬುಧವಾರ ತಡರಾತ್ರಿ ನಡೆದಿದೆ.
ಶಿಲ್ಪಾ (28) ಮೃತ ಶಿಕ್ಷಕಿ. 7 ವರ್ಷಗಳ ಹಿಂದೆ ಶಿಲ್ಪಾ ಅವರು ಜಯಕುಮಾರ್ ಎಂಬುವರನ್ನು ಮದುವೆಯಾಗಿದ್ದು, ಒಂದು ಹೆಣ್ಣು ಮಗು ಇತ್ತು. ಜಯಕುಮಾರ್ ಯಾವುದೇ ಕೆಲಸಕ್ಕೆ ಹೋಗುತ್ತಿರಲಿಲ್ಲ. ಬದಲಿಗೆ ಕ್ರಿಕೆಟ್ ಬೆಟ್ಟಿಂಗ್ ಚಟಕ್ಕೆ ಬಿದ್ದು ಕೋಟ್ಯಂತರ ರುಪಾಯಿ ಸಾಲ ಮಾಡಿದ್ದ. ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಶಿಲ್ಪಾ ಸಂಬಳದಿಂದಲೇ ಮನೆಯ ವ್ಯವಹಾರ ನಡೆಯುತ್ತಿತ್ತು.
ಈ ನಡುವೆ ಯಾವುದೇ ಕೆಲಸಕ್ಕೆ ಹೋಗದೆ ಸಾಲ ಮಾಡಿಕೊಂಡಿದ್ದ ಜಯಕುಮಾರ್, ಶಿಲ್ಪಾಗೆ ತವರು ಮನೆಯಿಂದ ಹಣ ತರುವಂತೆ ಪೀಡಿಸುತ್ತಿದ್ದ. ಅಲ್ಲದೇ ಮಾನಸಿಕವಾಗಿ ಹಾಗೂ ದೈಹಿಕವಾಗಿಯೂ ಹಿಂಸೆ ನೀಡುತ್ತಿದ್ದ. ಇದಕ್ಕೆ ಬೇಸತ್ತ ಶಿಲ್ಪಾ ಬುಧವಾರ ತಡರಾತ್ರಿ ನೇಣಿಗೆ ಶರಣಾಗಿದ್ದಾಳೆ. ಜಯಕುಮಾರ್‍ನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಸಂಬಂಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.