

ಸಂಪಿಗೆ ರಸ್ತೆಯಿಂದ ನಾಗಸಂದ್ರದವರೆಗೆ ಹೋಗುತ್ತಿದ್ದಾಗ ದಿಢೀರನೆ ನಿಂತ ಮೆಟ್ರೋ, ಘಟನೆಗೆ ತಾಂತ್ರಿಕ ದೋಷ ಕಾರಣ: ಮೆಟ್ರೋ ಸ್ಪಷ್ಟನೆ
ಬೆಂಗಳೂರು: ಮೆಟ್ರೋ ಪ್ರಯಾಣ ನಂಬುವಂತಿಲ್ಲ, ನಂಬಿದ್ರೆ ನಡುಬೀದಿಯಲ್ಲಿ ಇರಬೇಕಾದ ಗತಿ ಬರಬಹುದು! ಕಾರಣವಿಷ್ಟೆ. ಸಂಪಿಗೆ ರಸ್ತೆಯಿಂದ ನಾಗಸಂದ್ರದವರೆಗೆ ಸಾಗುವ ಮೆಟ್ರೋನಲ್ಲಿ ಪದೇ ಪದೇ ತಾಂತ್ರಿಕ ದೋಷ ಕಾಣಿಸಿಕೊಳ್ಳುತ್ತಿದ್ದು,
ಒಂದೇ ವಾರದಲ್ಲಿ ಎರಡು ಬಾರಿ ದಾರಿ ಮಧ್ಯದಲ್ಲಿ ಸಂಚಾರ ನಿಂತು ಪ್ರಯಾಣಿಕರನ್ನು ಗಲಿಬಿಲಿಗೊಳಿಸಿದೆ. ಸೋಮವಾರ ಮಧ್ಯಾಹ್ನ 1ಗಂಟೆ ಸುಮಾರಿಗೆ ಇದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ಮೆಟ್ರೋ ರೈಲಿನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಸ್ಥಳದಲ್ಲೇ ನಿಂತಿತು. ಇದರಿಂದ ಪ್ರಯಾಣ ಅಲ್ಲಿಯೇ ಮೊಟಕುಗೊಂಡಿತು. ಯಶವಂತಪುರ ಭಾಗಕ್ಕೆ ತೆರಳಬೇಕಾಗಿದ್ದ ರೈಲು ಸಂಚಾರದಲ್ಲಿ ವ್ಯತ್ಯಯವಾಯಿತು. ಸೋಮವಾರದ ಘಟನೆಗೂ ಮೆಟ್ರೋ ನಿಗಮವು ವಿದ್ಯುತ್ ಸಂಪರ್ಕದಲ್ಲಿ ಉಂಟಾದ ತಾಂತ್ರಿಕ ತೊಂದರೆಯ ಕಾರಣವನ್ನೇ ಹೇಳಿದೆ. ಅಲ್ಲದೆ, 2 ಗಂಟೆಯೊಳಗೆ ಮತ್ತೆ ಸಂಚಾರ ಆರಂಭಿಸಿದೆ ಎಂದು ಸ್ಪಷ್ಟಪಡಿಸಿದೆ.
ಡಿ.17ರಂದು ಸಂಪಿಗೆ ರಸ್ತೆಯಿಂದ ರಾಜಾಜಿನಗರ ಮೆಟ್ರೋ ನಿಲ್ದಾಣದ ನಡುವೆ ತಾಂತ್ರಿಕ ಸಮಸ್ಯೆಗಳ ಕಾರಣದಿಂದ ಮೆಟ್ರೋ ರೈಲು ಸಂಚಾರ ಅರ್ಧಕ್ಕೆ ನಿಂತಿತ್ತು. ಬೆಳಗ್ಗೆ 7.30ರಿಂದ ಸಂಜೆ 5ರವರೆಗೆ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಸೋಮವಾರ ಸಹ ಕುವೆಂಪು ರಸ್ತೆ ಹಾಗೂ ರಾಜಾಜಿನಗರ ನಿಲ್ದಾಣದ ಮಧ್ಯಭಾಗದಲ್ಲಿ ಪ್ರಯಾಣ ನಿಲ್ಲಿಸಿತು. ಮೆಟ್ರೋ ಪ್ರಯಾಣಿಕರು ಮಾತ್ರ ಈ ಬೆಳವಣಿಗೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರೈಲಿನಲ್ಲಿ ಪ್ರಯಾಣಿಕರೊಬ್ಬರು ಪ್ರತಿಕ್ರಿಯೆ ನೀಡಿ, ಕುವೆಂಪು ರಸ್ತೆ ನಿಲ್ದಾಣದ ಬಳಿಕ ಬಲಕ್ಕೆ ಬಾಗಿರುವ ತಿರುವು ಇದೆ. ಈ ತಿರುವಿನಲ್ಲಿ ರೈಲು ಸಾಗುತ್ತಿರುವಾಗ ಶಬ್ದ ಕೇಳಿಸಿತು, ಅಷ್ಟರಲ್ಲಾಗಲೇ ರೈಲಿನ ಹೊರಗೆ ಹೊಗೆ ಕಾಣಿಸಿಕೊಂಡಿದೆ. ತಕ್ಷಣವೇ ರೈಲಿನೊಳಗಿದ್ದ ಕೆಲವರು ಆತಂಕಿತರಾಗಿದ್ದರು. ಇದೇ ವೇಳೆ ಯಾವುದೇ ರೀತಿಯ ತೊಂದರೆ ಇಲ್ಲ, ಆತಂಕ ಪಡುವ ಅಗತ್ಯವಿಲ್ಲ ಎಂದು ಮೆಟ್ರೋ ಸಂದೇಶ ಬಿತ್ತರಗೊಂಡಿತು ಎಂದರು.
ಸುಮಾರು 15 ನಿಮಿಷದ ನಂತರ ಮೆಟ್ರೋ ಸಿಬ್ಬಂದಿ ಬಂದು ಬಾಗಿಲುಗಳನ್ನು ತೆರೆದು, ಟ್ರ್ಯಾಕ್ ನಲ್ಲಿರುವ ರ್ಯಾಂಪ್‍ಗಳ ಮೂಲಕ ರಾಜಾಜಿನಗರ ನಿಲ್ದಾಣಕ್ಕೆ ಎಲ್ಲ ಪ್ರಯಾಣಿಕರನ್ನು ನಡೆಸಿಕೊಂಡು ಕರೆತರಲಾಯಿತು. ಈ ಬೆಳವಣಿಗೆ ಕುರಿತು ಮೆಟ್ರೋ ನಿಗಮ ಪ್ರತಿಕ್ರಿಯಿಸಿದ್ದು, ಕೇವಲ ವಿದ್ಯುತ್ ಪೂರೈಕೆಯಲ್ಲಾದ ವ್ಯತ್ಯಾಸ ಎಂದು ಸಮರ್ಥಿಸಿಕೊಂಡಿದೆ.