ಹಣ ಮಾಡುವಾಸೆಯಿಂದ ಯುವಕರಿಗೆ ಮೋಸ: ಆರೋಪಿ ಬಂಧನ

ಉದ್ಯೋಗ ಕೊಡಿಸುವುದಾಗಿ ಸುಳ್ಳು ಹೇಳಿ, ಐಟಿ ಉದ್ಯೋಗ ಮೇಳ ನಡೆಸಿ ಸಾವಿರಾರು ಉದ್ಯೋಗಾಕಾಂಕ್ಷಿಗಳಿಂದ ಹಣ ಪಡೆದು ವಂಚಿಸುತ್ತಿದ್ದ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಬೆಂಗಳೂರು: ಉದ್ಯೋಗ ಕೊಡಿಸುವುದಾಗಿ ಸುಳ್ಳು ಹೇಳಿ, ಐಟಿ ಉದ್ಯೋಗ ಮೇಳ ನಡೆಸಿ  ಸಾವಿರಾರು  ಉದ್ಯೋಗಾಕಾಂಕ್ಷಿಗಳಿಂದ ಹಣ ಪಡೆದು ವಂಚಿಸುತ್ತಿದ್ದ ಆರೋಪಿಯನ್ನು  ಬಸವನಗುಡಿ  ಪೊಲೀಸರು ಬಂಧಿಸಿದ್ದಾರೆ.

ಚೆನ್ನೈ ಮೂಲದ, ಜಯನಗರ ಟಿ ಬ್ಲಾಕ್ ನಲ್ಲಿ ವಾಸಿಸುತ್ತಿದ್ದ ಸಂತಾನ ಗೋಪಾಲನ್ ಬಂಧಿತ  ಆರೋಪಿ. ಹೆಚ್ಚು ಹಣ ಮಾಡುವ ದೃಷ್ಟಿಯಿಂದ ಗೋಪಾಲನ್ ಹಾಗೂ ಈತನ ಪತ್ನಿ ಅಂಬಿಕಾ ನಿರುದ್ಯೋಗಿಗಳಿಗೆ ಉದ್ಯೋಗ ನೀಡುತ್ತೇವೆ ಎಂದು ಹೇಳಿ, ವೆಬ್‍ಸೈಟ್, ಸಾಮಾಜಿಕ ಜಾಲತಾಣ, ಭಿತ್ತಿ ಪತ್ರಗಳ ಮೂಲಕ ಪ್ರಚಾರ ಮಾಡಿದ್ದಾರೆ. ಅಷ್ಟೇ ಅಲ್ಲ, ಮೇಳದಲ್ಲಿ ಪ್ರಮುಖ ಐಟಿ ಕಂಪನಿಗಳ ಸಹಯೋಗ ಕೂಡ ಇದೆ ಎಂದು ರಾಜ್ಯದಲ್ಲಿ ಮಾತ್ರವಲ್ಲ, ಹೊರ ರಾಜ್ಯಗಳಲ್ಲಿಯೂ  ಭರ್ಜರಿ ಪ್ರಚಾರ ಮಾಡಿದ್ದಾರೆ. ಅದರಂತೆ ನಗರದ  ಎಪಿಎಸ್ ವಾಣಿಜ್ಯ  ಕಾಲೇಜಿನ  ಆವರಣದಲ್ಲಿ ಉದ್ಯೋಗ ಮೇಳ ಏರ್ಪಡಿಸಿದ್ದಾರೆ. ಜೊತೆಗೆ  ಉದ್ಯೋಗ ಮೇಳದಲ್ಲಿ  ಪಾಲ್ಗೊಂಡ ವಿದ್ಯಾರ್ಥಿಗಳಿಂದ ತಲಾ ರು.100 ಹಣವನ್ನೂ ಮುಂಗಡವಾಗಿ ಕಟ್ಟಿಸಿಕೊಂಡಿದ್ದಾರೆ. ಇದುವೆ  ಸರಿಸುಮಾರು ರು.1.5 ಲಕ್ಷ ಸಂಗ್ರಹವಾಗಿತ್ತು.

ಮೇಳದಲ್ಲಿ ರಾಯಚೂರು, ಹುಬ್ಬಳ್ಳಿ ಸೇರಿದಂತೆ ಹೈದರಾಬಾದ್, ಚೆನ್ನೈನಿಂದ ಸುಮಾರು 2  ಸಾವಿರ ಉದ್ಯೋಗಾಕಾಂಕ್ಷಿಗಳು  ಭಾಗವಹಿಸಿದ್ದರು. ಆದರೆ, ಮೇಳದ ವಾತಾವರಣ ಕಂಡ  ನಿರುದ್ಯೋಗಿಗಳು ಒಂದು ಕ್ಷಣ ಶಾಕ್  ನೀಡಿದ್ದಾರೆ. ಏಕೆಂದರೆ ಮೇಳದಲ್ಲಿ ಯಾವುದೋ  ಸ್ಥಳೀಯ  ಕಂಪನಿಯೊಂದು ಭಾಗವಹಿಸಿದ್ದು ಬಿಟ್ಟರೆ, ಯಾವ ಪ್ರಮುಖ ಐಟಿ ಕಂಪನಿಗಳು  ಭಾಗವಹಿಸಿರಲಿಲ್ಲ. ಜೊತೆಗೆ ಎಂಎಸ್‍ಸಿ, ಎಂಸಿಎ ಸೇರಿದಂತೆ ಎಲ್ಲ ವಿದ್ಯಾರ್ಹತೆಗಳ  ವಿದ್ಯಾರ್ಥಿಗಳಿಗೆ ಮೇಳದಲ್ಲಿ ಆಹ್ವಾನ ಎಂದು ಜಾಹಿರಾತು ನೀಡಿದ್ದರು. ಆದರೆ, ಮೇಳದಲ್ಲಿ   ಬಿಇ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿದೆ ಎಂದು ಆಯೋಜಕರು ಪ್ರಕಟಿಸಿದರು.

ಆಯೋಜಕರ ವಿರುದ್ಧ ಕಿಡಿ:
ಇದರಿಂದ ಗಾಬರಿಗೊಂಡ ಉದ್ಯೋಗ ಆಕಾಂಕ್ಷಿಗಳು,       ಉದ್ಯೋಗವೂ ಇಲ್ಲದೇ ಹಣವೂ ಇಲ್ಲದೇ ವಿಚಲಿತಕ್ಕೊಳಗಾದರು. ರೊಚ್ಚಿಗೆದ್ದ ಆಕಾಂಕ್ಷಿಗಳು ಆಯೋಜಕರ ವಿರುದ್ಧ ಹರಿಹಾಯ್ದರು. ಇದರಿಂದ ಗಾಬರಿಗೊಂಡ ಆಯೋಜಕರು ಈ ವೇಳೆ   ಕೆಲ ಆಕಾಂಕ್ಷಿಗಳ ಹಣವನ್ನು ವಾಪಸ್ ಮಾಡಿದರು. ಈ ಮೇಳವನ್ನು ಆಯೋಜಿಸಲು  ಆರೋಪಿ ಎಪಿಎಸ್ ಕಾಲೇಜು ಆಡಳಿತ ಮಂಡಳಿಗೆ ರು.10 ಸಾವಿರ ನೀಡಿದ್ದರು.

ಇದೇ ವೇಳೆ ಮೇಳದಲ್ಲಿ ಪಾಲ್ಗೊಂಡಿದ್ದ ಅಮೋಘ್ ಎಂಬುವರು ಬಸವನಗುಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಕೂಡಲೇ ಸ್ಥಳಕ್ಕೆ  ಆಗಮಿಸಿದ ಪೊಲೀಸರು ಗೋಪಾಲನ್‍ನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಎಲ್ಲ  ವಿಚಾರಗಳನ್ನು ಬಾಯಿಬಿಟ್ಟ ಗೋಪಾಲನ್ ಹೆಚ್ಚು ಹಣ ಮಾಡುವ ಉದ್ದೇಶದಿಂದ ಈ ಕೆಲಸ ಮಾಡಿದ್ದೇನೆ ಎಂದು ತಿಳಿಸಿದ್ದಾನೆ.  ಗೋಪಾಲನ್ ಪತ್ನಿ ಅಂಬಿಕಾ ಅವರನ್ನು ಸದ್ಯ ವಶಕ್ಕೆ ಪಡೆದಿಲ್ಲ. ಅಗತ್ಯಬಿದ್ದರೆ ಅವರನ್ನು ವಶಕ್ಕೆ ಪಡೆದು  ವಿಚಾರಣೆಗೆ ಒಳಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತನಿಂದ .24,440 ನಗದು, ಉದ್ಯೋಗಾಂಕ್ಷಿಗಳಿಂದ ಹಣ ಪಡೆದು ನೀಡಿದ್ದ ರಸೀದಿಗಳು ಹಾಗೂ ರಸೀದಿ ಪುಸ್ತಕಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಜಾಹೀರಾತಿನಲ್ಲಿ ಎಪಿಎಸ್ ಕಾಲೇಜಿನ ಹೆಸರು ಹಾಕಿದ್ದರಿಂದ ನಾವು ದೂರದ ಊರುಗಳಿಂದ ಬಂದಿದ್ದೇವೆ. ನಮಗೆ ಈ ರೀತಿ ಅನ್ಯಾಯ ಮಾಡಿ  ದ್ದಾರೆ. ನಮಗೆ ಹಣವೂ ಇಲ್ಲ, ಇತ್ತ  ಉದ್ಯೋಗವೂ  ಇಲ್ಲದ ಸ್ಥಿತಿಗೆ ಬಂದಿದ್ದೇವೆ. ಇವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು  ವಿದ್ಯಾರ್ಥಿಗಳು ಪೊಲೀಸರನ್ನು ಒತ್ತಾಯಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com