ಬೆಂಗಳೂರು: ವಾಲ್ಮೀಕಿನಗರದ ಮನೆಯೊಂದಕ್ಕೆ ನುಗ್ಗಿರುವ ದುಷ್ಕರ್ಮಿಗಳು ನಗದು ಹಾಗೂ ಚಿನ್ನಾಭರಣ ದೋಚಿ ಬಳಿಕ ಬಟ್ಟೆ ಮತ್ತು ಹಾಸಿಗೆಗಳಿಗೆ ಬೆಂಕಿ ಹಚ್ಚಿ ಪರಾರಿಯಾಗಿರುವ ಘಟನೆ ಗುರುವಾರ ನಡೆದಿದೆ.
ವಾಲ್ಮೀಕಿನಗರದ 2ನೇ ಮುಖ್ಯರಸ್ತೆಯ 10ನೇ ಅಡ್ಡರಸ್ತೆಯ ನಿವಾಸಿ ಯಾಸ್ಮಿನ್(42) ಎಂಬುವರ ಮನೆಗೆ ದುಷ್ಕರ್ಮಿಗಳು ನುಗ್ಗಿ ಈ ಕೃತ್ಯ ಎಸೆಗಿದ್ದಾರೆ. ಅಗರ್ ಬತ್ತಿ ಕಾರ್ಮಿಕರಾಗಿರುವ ಯಾಸ್ಮಿನ್ ಮತ್ತು ಕುಟುಂಬದ ಸದಸ್ಯರು ಈದ್ ಮಿಲಾದ್ ಹಬ್ಬದ ಅಂಗವಾಗಿ ಗುರುವಾರ ಬೆಳಗ್ಗೆ ಕೋಲಾರ ಜಿಲ್ಲೆ ಚಿಂತಾಮಣಿಯ ಸಂಬಂಧಿಕರ ಮನೆಗೆ ತೆರಳಿದ್ದರು.
ಈ ವೇಳೆ ಬಾಗಿಲ ಬೀಗ ಮುರಿದು ಒಳ ನುಗ್ಗಿರುವ ದುಷ್ಕರ್ಮಿಗಳು, ಬೀರುವಿನಲ್ಲಿದ್ದ 18 ಗ್ರಾಂ ಚಿನ್ನಾಭರಣ ಮತ್ತು ನಗದು ದೋಚಿದ್ದಾರೆ. ಬಳಿಕ ಬಟ್ಟೆ ಹಾಗೂ ಹಾಸಿಗೆಗಳನ್ನು ಒಂದೆಡೆ ಹಾಕಿ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ.
ರಾತ್ರಿ 2 ಗಂಟೆ ಸುಮಾರಿಗೆ ಮನೆಯ ಕಿಟಕಿಯಿಂದ ದಟ್ಟ ಹೊಗೆ ಬರುತ್ತಿರುವುದನ್ನು ನೆರೆಹೊರೆಯ ನಿವಾಸಿಗಳು ಗಮನಿಸಿದ್ದಾರೆ. ಕೂಡಲೇ ಮನೆ ಪ್ರವೇಶಿಸಿ ಅಡುಗೆ ಕೋಣೆಯಲ್ಲಿದ್ದ ಗ್ಯಾಸ್ ಸಿಲಿಂಡರ್ ಹೊರಗೆ ತಂದಿದ್ದಾರೆ.
ನಂತರ ನೀರು ಸುರಿದು ಬೆಂಕಿ ನಂದಿಸಿದ್ದಾರೆ. ನಂತರ ಯಾಸ್ಮಿನ್ ಅವರಿಗೆ ಮೊಬೈಲ್ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಚಿಂತಾಮಣಿಯಿಂದ ವಾಪಸಾದ ಯಾಸ್ಮಿನ್, ಮನೆಗೆ ಹೋಗಿ ನೋಡಿದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಚಾಮರಾಜ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಯಾವುದೋ ಕಾರಣಕ್ಕೆ ಕೆಲ ದಿನಗಳ ಹಿಂದೆ ವ್ಯಕ್ತಿಯೊಬ್ಬ ಯಾಸ್ಮಿನ್ ಜತೆಗೆ ಜಗಳವಾಡಿದ್ದ. ನಿನಗೆ ಸರಿಯಾಗಿ ಪಾಠ ಕಲಿಸುವುದಾಗಿ ಆವಾಜ್ ಹಾಕಿ ಹೋಗಿದ್ದ. ಹೀಗಾಗಿ ಹಳೆ ದ್ವೇಷದ ಹಿನ್ನೆಲೆಯಲ್ಲಿ ಆತನೇ ಈ ದುಷ್ಕೃತ್ಯ ಎಸಗಿರಬಹುದೆಂದು ಯಾಸ್ಮಿನ್ ಅವರು ದೂರಿನಲ್ಲಿ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ತನಿಖೆ ತೀವ್ರಗೊಳಿಸಿದ್ದು ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದರು.
ಗುಜರಿ ಅಂಗಡಿಗೆ ಬೆಂಕಿ: ಗುಜರಿ ಅಂಗಡಿಯಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಗುಜರಿ ಸಾಮಾನುಗಳು ಹೊತ್ತಿ ಉರಿದ ಘಟನೆ ಹುಳಿಮಾವು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ನಡೆದಿದೆ. ದೊಡ್ಡಕಮ್ಮನಹಳ್ಳಿ ಮುಖ್ಯ ರಸ್ತೆಯಲ್ಲಿರುವ ಮುರುಗ ಎಂಬುವರ ಗುಜರಿ ಅಂಗಡಿಯಲ್ಲಿ ಮಧ್ಯಾಹ್ನ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಸ್ಥಳೀಯರೇ ನೀರು ಸುರಿದ ಬೆಂಕಿ ನಂದಿಸಿದ್ದಾರೆ. ಘಟನೆಯಿಂದ ಅಂಗಡಿಯಲ್ಲಿ ಸಣ್ಣ ಪ್ರಮಾಣ ನಷ್ಟ ಉಂಟಾಗಿದೆ ಎಂದು ಪೊಲೀಸರು ತಿಳಿಸಿದರು.