ತವರಿಗೆ ತೆರಳಿದ್ದಕ್ಕೆ ಪತ್ನಿ ಬಟ್ಟೆಗೆ ಬೆಂಕಿ ಇಟ್ಟ ಪತಿ!

ಹೆಂಡತಿಗೆ ತವರಿಗೆ ತೆರಳಿದಳೆಂದು ಆಕ್ರೋಶಗೊಂಡ ಪತಿರಾಯ ಮನೆಯೊಳಗಿನ ಹೆಂಡತಿಯ ಬಟ್ಟೆಗಳನ್ನು ಗುಡ್ಡೆ ಹಾಕಿದ. ಕಡ್ಡಿಗೀರಿ ಬೆಂಕಿ ಇಟ್ಟ!...
ಬೆಂಕಿ
ಬೆಂಕಿ
Updated on: 

ಬೆಂಗಳೂರು: ಹೆಂಡತಿಗೆ ತವರಿಗೆ ತೆರಳಿದಳೆಂದು ಆಕ್ರೋಶಗೊಂಡ ಪತಿರಾಯ ಮನೆಯೊಳಗಿನ ಹೆಂಡತಿಯ ಬಟ್ಟೆಗಳನ್ನು ಗುಡ್ಡೆ ಹಾಕಿದ. ಕಡ್ಡಿಗೀರಿ ಬೆಂಕಿ ಇಟ್ಟ! ಆಮೇಲೆ ಮನೆ ಬಾಗಿಲು ಮುಚ್ಚಿಕೊಂಡು ತಣ್ಣಗೆಮನೆಯಿಂದ ಹೊರ ಹೋಗಿಬಿಟ್ಟ. ಪರಿಣಾಮ ಬೆಂಕಿಯ ಜ್ವಾಲೆಗಳು ಮನೆಯೊಳಗೆಲ್ಲ ಆವರಿಸಿ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡಿದೆ.

ಯಾವದೋ ಸಿನೆಮಾದ ದೃಶ್ಯದಂತಿರುವ ಈ ಘಟನೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ. ಸುಭಾಷ್‍ನಗರದ ಮಣಿಪಾಲ್ ಕೌಂಟ್ರಿ ರಸ್ತೆಯ ಸಿಂಗಸಂದ್ರ ನಿವಾಸಿ ಆಟೋ ಚಾಲಕ ಮಹಮ್ಮದ್ ಅಲಿ ಈ ಕಿತಾಪತಿಗೆ ಕಾರಣವಾದ ಪತಿರಾಯ. ಕಂಠಪೂರ್ತಿ ಮದ್ಯಪಾನ ಮಾಡಿ ತಡರಾತ್ರಿ ಮನೆಗೆ ಬಂದ ಮಹಮ್ಮದ್ ಅಲಿ, ಕ್ಷುಲ್ಲಕ ಕಾರಣಕ್ಕೆ ಪತ್ನಿಯೊಂದಿಗೆ ಜಗಳ ಆರಂಭಿಸಿದ್ದಾನೆ. ಹೆಂಡತಿ ಎದುರು ವಾದಿಸಿದ್ದರಿಂದ ಕೋಪೋದ್ರಿಕ್ತನಾಗಿ ಪತ್ನಿಗೆ ಬಾಸುಂಡೆ ಬರುವಂತೆ ಬಾರಿಸಿದ್ದಾನೆ. ಈತನ ಹೊಡೆತ ತಾಳಲಾರದೆ ಪತ್ನಿ ಸಲ್ಮಾ ರಾತ್ರೋರಾತ್ರಿ ತನ್ನ 5 ಮಕ್ಕಳೊಂದಿಗೆ ಮಂಗಮ್ಮನ ಪಾಳ್ಯದಲ್ಲಿರುವ ತಾಯಿ ಮನೆಗೆ ತೆರಳಿದ್ದಾರೆ. ಇದರಿಂದ ಮತ್ತಷ್ಟು ವಿಚಲಿತನಾದ ಅಲಿ ಏನು ಮಾಡಬೇಕೆಂಬುದು ತಿಳಿಯದೆ ಸಿಟ್ಟಿನ ಕೈಯಲ್ಲಿ ಬುದ್ಧಿ ಕೊಟ್ಟವನಂತೆ ಹೆಂಡತಿಯ ಬಟ್ಟೆಗಳನ್ನೆಲ್ಲ ಗುಡ್ಡೆ ಹಾಕಿ ಬೆಂಕಿ ಇಟ್ಟಿದ್ದಾನೆ. ನಂತರ ಬೆಂಕಿಯ ಜ್ವಾಲೆಗಳ ತಾಪ ತಾಳಲಾರದೆ ಮನೆ ಚಿಲಕ ಹಾಕಿಕೊಂಡು ಹೊರ ಹೋಗಿ ಬಿಟ್ಟಿದ್ದಾನೆ.

ಒಳಗೆ ಹೊತ್ತಿ ಉರಿಯುತ್ತಿದ್ದ ಬೆಂಕಿಯ ಪ್ರಖರತೆ ಹೆಚ್ಚಾಗಿ ಮುಂಜಾನೆ 2 ಗಂಟೆ ಸುಮಾರಿಗೆ ಅಡುಗೆ ಮನೆಯಲ್ಲಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದೆ. ಘಟನೆಯಿಂದ ಮನೆ ಹಾಗೂ ಅಕ್ಕಪಕ್ಕದ ಮನೆಗಳಿಗೆ ಸಣ್ಣಪುಟ್ಟ ಹಾನಿಯಾಗಿದೆ. ಸ್ಫೋಟದ ಶಬ್ದಕ್ಕೆ ಬೆಚ್ಚಿದ್ದ ನೆರೆಹೊರೆಯವರು ಹೊರಗೆ ಬಂದು ನೋಡಿದಾಗ ಮನೆಯೊಳಗೆ ಇನ್ನೂ ಬೆಂಕಿ ಉರಿಯುತ್ತಿರುವುದು ಕಂಡು ಬಂದಿದೆ. ತಕ್ಷಣ ಕೆಲ ಸ್ಥಳೀಯರು ಅಗ್ನಿಶಾಮಕ ಠಾಣೆಗೆ ಕರೆ ಮಾಡಿದ್ದಾರೆ. ಇದಾದ ಕೆಲ ಹೊತ್ತಿಗೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡು ಬೆಂಕಿ ನಂದಿಸಿದ್ದಾರೆ.

ಈ ವೇಳೆ ನೆರವಿಗೆ ಧಾವಿಸಿದ ವ್ಯಕ್ತಿಯೊಬ್ಬರ ಕಾಲಿಗೂ ಸಹ ಸಣ್ಣ ಪ್ರಮಾಣದ ಗಾಯವಾಗಿದ್ದು, ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com