

ಬೆಂಗಳೂರು: ಲೈಂಗಿಕ ಕಾರ್ಯಕರ್ತೆಯ ಬಳಿ ಚಿನ್ನಾಭರಣ ದೋಚುವ ಉದ್ದೇಶದಿಂದ ದೈಹಿಕ ಸಂಪರ್ಕ ಪಡೆಯುವ ನೆಪದಲ್ಲಿ ಉಸಿರುಗಟ್ಟಿಸಿ ಕೊಲೆ ಮಾಡಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ.
ಹೆಬ್ಬಗೋಡಿಯಲ್ಲಿ ವಾಸವಿದ್ದ ಕೇರಳ ಮೂಲದ ಅಜಯ್(24) ಹಾಗೂ ಬಸ್ರುದ್ದೀನ್(45) ಬಂಧಿತರು. ಹೊಸ ರಸ್ತೆ ಚನ್ನಕೇಶವ ನಗರ 2ನೇ ಕ್ರಾಸ್‍ನಲ್ಲಿರುವ ಬಾಡಿಗೆ ಮನೆಯಲ್ಲಿ ವಾಸವಿದ್ದ ಲೈಂಗಿಕ ಕಾರ್ಯಕರ್ತೆ ಅಖಿಲಾಂಡೇಶ್ವರಿ (38) ಎಂಬಾಕೆಯನ್ನು ಉಸಿರುಗಟ್ಟಿಸಿ ಕೊಲೆಗೈದು, ಚಿನ್ನ ಲೇಪಿತ ನಕಲಿ ಒಡವೆಗಳನ್ನು ದೋಚಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಏನಿದು ಘಟನೆ?: ತಮಿಳುನಾಡು ಮೂಲದ ಅಖಿಲಾಂಡೇಶ್ವರಿ ವಿವಾಹಿತಳಾಗಿದ್ದು ಹಲವು ವರ್ಷಗಳ ಹಿಂದೆಯೇ ಪತಿಯನ್ನು ತೊರೆದು ಬೆಂಗಳೂರಿಗೆ ಬಂದು ನೆಲೆಸಿದ್ದಳು. ಇಲ್ಲಿನ
ವಿ.ಕೃಷ್ಣಪ್ಪ ಎಂಬುವರಿಗೆ ಸೇರಿದ ಮನೆಯಲ್ಲಿ ಬಾಡಿಗೆ ವಾಸವಿದ್ದಳು. ತಿಂಗಳ ಬಾಡಿಗೆ ಪಡೆಯಲೆಂದು ಮಾಲೀಕ ಕೃಷ್ಣಪ್ಪ ಜೂ.2ರಂದು ಅಖಿಲಾಂಡೇಶ್ವರಿ ಮನೆಗೆ ಬಂದಿದ್ದರು. ಆದರೆ, ಮನೆಗೆ ಹೊರಗಿನಿಂದ ಬೀಗ ಹಾಕಲಾಗಿತ್ತು. ಅಲ್ಲದೇ ಒಳಗಿನಿಂದ ವಾಸನೆ ಬರುತ್ತಿತ್ತು. ಈ ಹಿನ್ನೆಲೆಯಲ್ಲಿ ಕೃಷ್ಣಪ್ಪ, ನೆರೆಹೊರೆಯವರನ್ನು ವಿಚಾರಿಸಿದಾಗ, ನಾಲ್ಕೈದು ದಿನಗಳಿಂದ ಮನೆಗೆ ಬೀಗ ಹಾಕಲಾಗಿದೆ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ಕಿಟಕಿಯಿಂದ ನೋಡಿದಾಗ ಅಖಿಲಾಂಡೇಶ್ವರಿ ಶವ ಕೊಳೆತ ಸ್ಥಿತಿಯಲ್ಲಿ ಸಿಕ್ಕಿತ್ತು.
ಕೂಡಲೇ ಕೃಷ್ಣಪ್ಪ ಅವರು ಪರಪ್ಪನ ಅಗ್ರಹಾರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದಾಗ ಉಸಿರುಗಟ್ಟಿಸಿ ಕೊಲೆ ಮಾಡಿರುವುದು ತಿಳಿದು ಬಂದಿತ್ತು. ಹೀಗಾಗಿ, ಪರಿಚಿತರೇ ಕೃತ್ಯ ಎಸಗಿರಬಹುದು ಎನ್ನುವ ಅನುಮಾನದ ಮೇಲೆ ತನಿಖೆ ಆರಂಭಿಸಿದ ಪೊಲೀಸರು, ಮೊದಲು ಸಿದ್ದಯ್ಯನ್ ಎಂಬಾತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ಆರಂಭಿಸಿದರು. 15 ವರ್ಷಗಳಿಂದ ತನಗೂ ಆಕೆಗೂ ಪರಿಚಯ. ಆದರೆ, ಕೊಲೆ ಮಾಡಿಲ್ಲ. ಆದರೆ, ತನ್ನಂತೆ ಹಲವರೊಂದಿಗೆ ಅಖಿಲಾಂಡೇಶ್ವರಿ ಸಂಪರ್ಕ ಹೊಂದಿದ್ದಾಳೆಂದು ತಿಳಿಸಿದ್ದ.
ಆಗ ಪೊಲೀಸರು ಅಖಿಲಾಂಡೇಶ್ವರಿ ಮನೆಯ ನೆರೆಹೊರೆಯವರನ್ನು ವಿಚಾರಿಸಿದಾಗ ಮೇ 29ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಇಬ್ಬರು ವ್ಯಕ್ತಿಗಳು ಬಂದಿದ್ದನ್ನು ಗಮನಿಸಿದ್ದಾಗಿ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ಪತ್ತೆಗೆ ಶೋಧ ಕಾರ್ಯವನ್ನು ಪೊಲೀಸರು ಮುಂದುವರಿಸಿದರು. ಮೃತಳೊಂದಿಗೆ ಫೋನ್ ಮೂಲಕ ಸಂಪರ್ಕದಲ್ಲಿದ್ದವರನ್ನು ಒಬ್ಬೊಬ್ಬರಾಗಿ ವಿಚಾರಣೆ ಆರಂಭಿಸಿದರು. ಈ ವೇಳೆ ಆರೋಪಿ ಅಜಯ್ ಕೂಡಾ ಸಂಪರ್ಕದಲ್ಲಿದ್ದೂ, ಮೈಸೂರಿನಲ್ಲಿರುವುದು ತಿಳಿಯಿತು. ಪೊಲೀಸರು ಅಲ್ಲಿಗೆ ತೆರಳಿ ಆರೋಪಿಯನ್ನು ಬಂಧಿಸಿದರು. ನಂತರ ಆತ ನೀಡಿದ ಸುಳಿವಿನ ಮೇರೆಗೆ ಹೆಬ್ಬಗೋಡಿಯಲ್ಲಿ ಬೇಕರಿ ನಡೆಸುತ್ತಿರುವ ಬಸ್ರುದ್ದೀನ್‍ನನ್ನು ಬಂಧಿಸಿದ್ದಾರೆ.
ಆಭರಣಕ್ಕಾಗಿ ಕೊಲೆ: ನಗರದಲ್ಲಿ ಸಣ್ಣ ಪುಟ್ಟ ಕೂಲಿ ಕೆಲಸ ಮಾಡಿಕೊಂಡಿದ್ದ ಆರೋಪಿ ಅಜಯ್ ಗೆ ಮಹಿಳೆಯರ ಸಹವಾಸವಿತ್ತು. ಆಗಾಗ ಅಖಿಲಾಂಡೇಶ್ವರಿ ಬಳಿ ಹೋಗುತ್ತಿದ್ದ. ಆತನಿಗೆ ಹಣಕಾಸಿನ ಸಮಸ್ಯೆ ಉಂಟಾಗಿತ್ತು. ಈ ನಡುವೆ ತನ್ನದೇ ಊರಿನವನಾದ ಬಸ್ರುದ್ದಿನ್ ಪರಿಚಯವಿತ್ತು. ಆತನಿಗೂ ಬೇಕರಿ ವ್ಯಾಪಾರದಲ್ಲಿ ನಷ್ಟ ಉಂಟಾಗಿ ಆತನೂ ಹಣಕಾಸಿನ ತೊಂದರೆ ಅನುಭವಿಸುತ್ತಿದ್ದ. ಈ ಹಿನ್ನೆಲೆಯಲ್ಲಿ ಹೇಗಾದರೂ ದುಡ್ಡು ಸಂಪಾದಿಸಬೇಕು ಎಂದು ಯೋಜಿಸಿದ ಅಜಯ್, ಬಸ್ರುದ್ದೀನ್ ಜತೆ ಸೇರಿ ಅಖಿಲಾಂಡೇಶ್ವರಿ ಕೊಲೆ ಮಾಡಿ ಆಕೆಯ ಬಳಿ ಇರುವ ಚಿನ್ನಾಭರಣ ದೋಚುವ ಸಂಚು ರೂಪಿಸಿದ್ದ.
ಅದರಂತೆ ಜೂ.2ರಂದು ಬೆಳಗ್ಗೆ 11 ಗಂಟೆಗೆ ಇಬ್ಬರು ಆರೋಪಿಗಳು ಮನೆಯೊಳಗೆ ಹೋಗಿದ್ದಾರೆ. ಈ ವೇಳೆ, ಅಜಯ್ ದೈಹಿಕ ಸಂಪರ್ಕ ಸಾಧಿಸುವ ನೆಪದಲ್ಲಿ ಅಖಿಲಾಂಡೇಶ್ವರಿ ಮೈ ಮೇಲೆರಗಿ ಬಾಯಿ ಹಾಗೂ ಮೂಗು ಮುಚ್ಚಿ ಉಸಿರುಗಟ್ಟಿಸಿದ್ದಾನೆ. ಆಗ ಪ್ರತಿರೋಧ ವ್ಯಕ್ತಪಡಿಸದಂತೆ ಮತ್ತೊಬ್ಬ ಆರೋಪಿ ಬಸ್ರುದ್ದೀನ್ ಕೈಗಳನ್ನು ಹಿಡಿದುಕೊಂಡಿದ್ದ. ಕೃತ್ಯ ಎಸಗಿದ ಬಳಿಕ ಕಾಬೋರ್ಡ್‍ನಲ್ಲಿಟ್ಟಿದ್ದ ಚಿನ್ನ ಲೇಪಿತ ಒಡವೆಗಳನ್ನು ತೆಗೆದುಕೊಂಡು ಹೊರಗಿನಿಂದ ಬೀಗ ಹಾಕಿ ಪರಾರಿಯಾಗಿದ್ದರು. ಬಳಿಕ, ಸೂಕ್ಷ್ಮವಾಗಿ ನೋಡಿದಾಗ ಅದು ನಕಲಿ ಎನ್ನುವುದು ಗೊತ್ತಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.