

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭದ್ರತೆಗಿದ್ದ ಪೊಲೀಸ್ ಇನ್ಸ್ ಪೆಕ್ಟರ್ ಸಮೀವುಲ್ಲಾ ಖಾನ್ ವಿವಾಹವಾಗುವುದಾಗಿ ನಂಬಿಸಿ ವಂಚಿಸಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ಮಂಗಳವಾರ ಸಂಜೆ ಪೊಲೀಸ್ ಆಯುಕ್ತರನ್ನು ಭೇಟಿಯಾದ ಮಹಿಳೆ, ಇನ್ಸ್ ಪೆಕ್ಟರ್ ವಂಚನೆ ಬಗ್ಗೆ ವಿವರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ಭದ್ರತಾ ವಿಭಾಗದಿಂದ ಸಮೀವುಲ್ಲಾಖಾನ್‍ರನ್ನು ತೆರವುಗೊಳಿಸಲಾಗಿದೆ. ಇಲಾಖಾ ತನಿಖೆ ನಡೆಸಿ ಶಿಸ್ತು ಕ್ರಮ ಕೈಗೊಳ್ಳುವ ಭರವಸೆ ನೀಡಿ ಕಳುಹಿಸಿದ್ದಾರೆ.
ಉತ್ತರ ಪ್ರದೇಶ ಮೂಲದ ಮಹಿಳೆ ಕೆಲ ತಿಂಗಳ ಹಿಂದೆ ಆಸ್ತಿ ವಿಚಾರವಾಗಿ ನಡೆಯುತ್ತಿರುವ ತೊಂದರೆ ಬಗ್ಗೆ ಮುಖ್ಯಮಂತ್ರಿಗಳಿಗೆ ದೂರು ನೀಡಲು ಆಗಮಿಸಿದ್ದರು. ಈ ವೇಳೆ ಇನ್ಸ್ ಪೆಕ್ಟರ್ ಸಮೀವುಲ್ಲಾ ಪರಿಚಯವಾಗಿತ್ತು. ಬಳಿಕ ಇಬ್ಬರು ಸ್ನೇಹಿತರಾಗಿದ್ದರು. ಬಳಿಕ ಇಬ್ಬರ ನಡುವೆ ದೈಹಿಕ ಸಂಬಂಧ ಬೆಳೆದಿತ್ತು. ಸಮೀವುಲ್ಲಾ, ವಿವಾಹವಾಗುವುದಾಗಿ ಹೇಳಿ ಮಹಿಳೆ ಜತೆ ದೈಹಿಕ ಸಂಪರ್ಕ ಬೆಳೆಸಿದ್ದ. ಆದರೆ, ಹಲವು ತಿಂಗಳುಗಳಿಂದ ಎಷ್ಟೇ ಬಲವಂತ ಮಾಡಿದರೂ ವಿವಾಹವಾಗದೇ ಕೈ ಕೊಟ್ಟಿದ್ದಾನೆ. ಇತ್ತೀಚೆಗೆ ಆತನಿಗೆ ಮದುವೆಯಾಗಿ, ಮಕ್ಕಳಿರುವುದು ಗೊತ್ತಾಗಿದೆ ಎಂದು ಮಹಿಳೆ ಪೊಲೀಸ್ ಆಯುಕ್ತ ಎಂ.ಎನ್. ರೆಡ್ಡಿ ಅವರಿಗೆ ದೂರು ನೀಡಿದ್ದಾಳೆ.
ಲಿಖಿತ ರೂಪದಲ್ಲಿ ದೂರು ಕೊಟ್ಟ ಬಳಿಕ ತನಿಖೆ ನಡೆಸಿ ವರದಿ ನೀಡುವಂತೆ ಸಿಎಆರ್ ಜಂಟಿ ಪೊಲೀಸ್ ಆಯುಕ್ತರಾದ ಡಿ. ರೂಪಾ ಅವರಿಗೆ ನಿರ್ದೇಶಿಸುವುದಾಗಿ ಕಮಿಷನರ್, ಮಹಿಳೆಗೆ ಭರವಸೆ ನೀಡಿದ್ದಾರೆ.