'ಗೃಹ ಬಂಧನ' ತನಿಖೆಗೆ ಆಗ್ರಹ
ಕ.ಪ್ರ.ವಾರ್ತೆ ಚಿಕ್ಕಮಗಳೂರು ಮೇ 2
ವಿಧಾನಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡರ ಗೃಹ ಬಂಧನ ಪ್ರಕರಣ ಕುರಿತಂತೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಪರಸ್ಪರ ಆರೋಪ- ಪ್ರತ್ಯಾರೋಪ ಮಾಡಿವೆ.
ಇದರ ಜತೆಗೆ ಎರಡೂ ಪಕ್ಷಗಳು ಪೊಲೀಸ್ ಇಲಾಖೆಯ ಮೇಲೆ ಗೂಬೆ ಕೂರಿಸಿವೆ. ಈ ಪ್ರಕರಣದ ಬಗ್ಗೆ ತನಿಖೆ ನಡೆಸಲು ಎರಡು ಪಕ್ಷಗಳು ಗುರುವಾರದಂದು ಕೇಂದ್ರ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ ದೂರನ್ನು ಸಲ್ಲಿಸಿವೆ.
ಸಚಿವ ಸಿ.ಟಿ. ರವಿ ಅವರ ಕುಮ್ಮಕ್ಕಿನಿಂದ ಬಿಜೆಪಿ ಕಾರ್ಯಕರ್ತರು ವಿಧಾನಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಲ್. ಮೂರ್ತಿ ಆರೋಪಿಸಿದ್ದಾರೆ.
ಆಣೆ ಮಾಡಲಿ: ಬುಧವಾರ ನಡೆದ ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ಕಾರ್ಯಕರ್ತರು ಅತ್ಯಾಚಾರಕ್ಕೆ ಯತ್ನಿಸಿದ್ದಾರೆಂದು ಪೊಲೀಸರಿಗೆ ದೂರು ನೀಡಲಾಗಿದೆ. ಇದು, ಶುದ್ಧ ಸುಳ್ಳು. ಇದನ್ನು ಸತ್ಯವಾಗಿದ್ದರೆ ಧರ್ಮಸ್ಥಳದಲ್ಲಿ ಆಣೆ ಮಾಡಲು ಗಾಯತ್ರಿ ಶಾಂತೇಗೌಡ ಅವರು ಬರಲಿ ಎಂದು ಸಚಿವ ಸಿ.ಟಿ. ರವಿ ಹೇಳಿದ್ದಾರೆ.
ಜಿಲ್ಲೆ ಕಾಂಗ್ರೆಸ್ ಅಧ್ಯಕ್ಷ ಎಂ.ಎಲ್. ಮೂರ್ತಿ ಅವರು ಗುರುವಾರ ಬೆಳಿಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿ.ಟಿ. ರವಿ ಕುಮ್ಮಕ್ಕಿನಿಂದ ಈ ಘಟನೆ ನಡೆದಿದೆ. ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ನ್ಯಾಯ ಕೇಳಲು ಹೋದ ನಮ್ಮ ಪಕ್ಷದವರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಕೆಲವು ಪೊಲೀಸರು ಬಿಜೆಪಿ ಕಾರ್ಯಕರ್ತರಂತೆ ವರ್ತಿಸಿದ್ದಾರೆ. ಒಂದೇ ಸಮುದಾಯಕ್ಕೆ ಸೇರಿದವರನ್ನು ಗುರಿಯಾಗಿಟ್ಟುಕೊಂಡು ಈ ಕೃತ್ಯ ಎಸಗಲಾಗಿದೆ. ಇದು, ನಮಗೆ ಅನುಮಾನಕ್ಕೆ ಎಡೆ ಮಾಡಿ ಕೊಟ್ಟಿದೆ ಎಂದರು.
ಸುಳ್ಳು ದೂರು: ಹಣ ಹಂಚುತ್ತಿರುವುದನ್ನು ಖುದ್ದಾಗಿ ಹಿಡಿದು ಕೊಟ್ಟರು ಅವರ ವಿರುದ್ಧ ಪೊಲೀಸರು ಮೊಕದ್ದಮೆ ದಾಖಲು ಮಾಡಿಲ್ಲ. ಪೊಲೀಸ್ ಅಧಿಕಾರಿಗಳು ಒತ್ತಡಕ್ಕೆ ಮಣಿದಿದ್ದಾರೆ. ನಗರಸಭಾ ಸದಸ್ಯ ಹಾಗೂ ಬಿಜೆಪಿಯ ಪ್ರಮುಖ ಕಾರ್ಯಕರ್ತರು ಅತ್ಯಾಚಾರಕ್ಕೆ ಯತ್ನಿಸಿದರು ಎಂದು ಸುಳ್ಳು ದೂರು ನೀಡಲಾಗಿದೆ ಎಂದು ಸಚಿವ ಸಿ.ಟಿ. ರವಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನೀತಿ ಸಂಹಿತೆ ತಂಡ (ಎಂಸಿಸಿ) ತಪಾಸಣೆ ಮಾಡುವ ಮೊದಲೇ ಗಾಯಿತ್ರಿ ಶಾಂತೇಗೌಡ ಅವರು ಬಸವನಹಳ್ಳಿ ಸಬ್ ಇನ್ಸ್ಸ್ಪೆಕ್ಟರ್ ಕೈಗೆ ಹಣ ಕೊಟ್ಟಿದ್ದಾರೆ. ಮನೆಯೊಳಗೆ ಅಷ್ಟೋಂದು ಜನ ಇರುವಾಗ ಅತ್ಯಾಚಾರಕ್ಕೆ ಪ್ರಯತ್ನಿಸಿರುವುದು ಹೇಗೆಂದು ಪ್ರಶ್ನಿಸಿದ ರವಿ, ಪಕ್ಷದ ಕಾರ್ಯಕರ್ತರ ಮೇಲೆ ಹಾಕಿರುವ ಸುಳ್ಳು ದೂರನ್ನು ಕೂಡಲೇ ಕೈ ಬಿಡಬೇಕು ಎಂದು ಆಗ್ರಹಿಸಿದರು.
ಮೆಣಸಿನ ಮಲ್ಲೇದೇವರಹಳ್ಳಿ ಜೆಡಿಎಸ್ ಮುಖಂಡ ಎಸ್.ಎಲ್. ಬೋಜೇಗೌಡ ಅವರು ವಿಗ್ರಹ ಮೇಲೆ ಆಣೆ ಮಾಡಿಸಿ ಜನರಿಗೆ ದುಡ್ಡನ್ನು ಹಂಚಿದ್ದಾರೆ. ಅವರ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ.
ಆದರೆ, ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ತಮ್ಮ ವಿರುದ್ಧ ಕಾಂಗ್ರೆಸ್ ಮತ್ತು ಜೆಡಿಎಸ್ ಅಪಪ್ರಚಾರ ಮಾಡುತ್ತಿವೆ. ಈ ಸಂಬಂಧ ದೂರು ನೀಡಿದರೂ ಸಂಬಂಧಿತರನ್ನು ಬಂಧಿಸಿಲ್ಲ. ಜಾತ್ಯತೀತ ಪಕ್ಷವೆಂದು ಹೇಳಿಕೊಳ್ಳುತ್ತಿರುವ ಕಾಂಗ್ರೆಸ್ ಜಾತಿ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.
ಸುಳ್ಳು ಆರೋಪ: ತಮ್ಮ ಮೇಲೆ ಅತ್ಯಾಚಾರಕ್ಕೆ ಯತ್ನ ನಡೆದಿದೆ ಎಂದು ಗಾಯತ್ರಿ ಶಾಂತೇಗೌಡ ಅವರು ದೂರು ನೀಡಿದ್ದಾರೆ. ಅದು, ಸುಳ್ಳೆಂದು ನಾವು ಹೇಳುತ್ತೇವೆ. ಇದಕ್ಕೆ ಸಂಬಂಧಿಸಿದಂತೆ ಆಣೆ ಮಾಡಲು ಧರ್ಮಸ್ಥಳಕ್ಕೆ ಬರಲಿ, ನಾವು ಕೂಡ ಬರುತ್ತೇವೆ. ಜವಬ್ದಾರಿ ಸ್ಥಾನದಲ್ಲಿರುವವರು ಈ ರೀತಿಯ ಆರೋಪ ಮಾಡಿರುವುದು ಸರಿಯಲ್ಲ ಎಂದರು.
ಜಾಮೀನು: ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಅವರನ್ನು ಗೃಹ ಬಂಧನದಲ್ಲಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದ್ದ ಮೂವರಿಗೆ ಚಿಕ್ಕಮಗಳೂರಿನ ಜೆಎಂಎಫ್ಸಿ ನ್ಯಾಯಾಲಯ ಗುರುವಾರ ಜಾಮೀನಿನ ಬಿಡುಗಡೆ ಮಾಡಿದೆ.
ಬುಧವಾರ ನಡೆದಿರುವ ಘಟನೆಗೆ ಸಂಬಂಧಿಸಿದಂತೆ ನಗರಸಭಾ ಸದಸ್ಯ ಕಾಯಿ ರವಿ, ಅನಿಲ್ ,ಸುಂದರೇಶ್ಗೌಡರನ್ನು ಬಸವನಹಳ್ಳಿ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ನ್ಯಾಯಾಲಯ ಆರೋಪಿಗಳಿಗೆ ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

