ದಕ್ಷಿಣ ಕನ್ನಡ

ಜಿಲ್ಲಾದ್ಯಂತ ನಾಗಾರಾಧನೆ

Published On :

ಮಂಗಳೂರು/ಸುಬ್ರಹ್ಮಣ್ಯ/ಉಪ್ಪಿನಂಗಡಿ/ಬೆಳ್ತಂಗಡಿ/ಮೂಲ್ಕಿ/ಬಂಟ್ವಾಳ: ಭಾನುವಾರ ನಾಗರಪಂಚಮಿ ಸಂಭ್ರಮ. ನಗರದ ರಸ್ತೆಗಳಲ್ಲಿ ಗೆಂದಾಳೆ ಸೀಯಾಳ, ಕೇದಗೆ, ಸೇವಂತಿಗೆ ಹೂವುಗಳ ಮಾರಾಟ ಬಲು ಜೋರಾಗಿತ್ತು.
ಕುಡುಪು ಶ್ರೀ ಅನಂತಪದ್ಮನಾಭ ಕ್ಷೇತ್ರದ ನಾಗಬನಕ್ಕೆ ಬೆಳಗ್ಗೆ 6.30ರಿಂದಲೇ ನಾಗತಂಬಿಲ ಸೇವೆ ಪ್ರಾರಂಭಗೊಂಡಿತ್ತು. ಬೆಳಗ್ಗಿನಿಂದ ಜನರು ಭಕ್ತರು ಎಳನೀರು, ಹಾಲು ಅಭಿಷೇಕ ಮಾಡಿ ಸೇವೆ ಸಲ್ಲಿಸಿದರು. ಸಮಯ ಕಳೆದಂತೆ ಸರತಿ ಸಾಲು ರಸ್ತೆ ಸಮೀಸಿತ್ತು. ಇದೇ ಸಂದರ್ಭ ಶ್ರೀಅನಂತ ಪದ್ಮನಾಭ ದೇವರಿಗೆ ವಿಶೇಷ ಪೂಜೆ ನಡೆಯಿತು.
ನಗರದ ಶರವು ಶ್ರೀ ಮಹಾಗಣಪತಿ ದೇವಸ್ಥಾನ, ಶ್ರೀ ಮಂಗಳಾದೇವಿ ದೇವಸ್ಥಾನ, ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನ, ಶ್ರೀ ಸೋಮನಾಥೇಶ್ವರ ದೇವಸ್ಥಾನ ಮತ್ತು ಕಲ್ಲಾಪಿನ ನಾಗನ ಕಟ್ಟೆಗೆ ನಾಗರ ಪಂಚಮಿ ಪೂಜೆ ನಡೆಯಿತು. ಕುದ್ರೋಳಿ ಬಳಿ ರಸ್ತೆ ಬದಿಯಲ್ಲಿರುವ ನಾಗನ ಕಟ್ಟೆಗಳಿಗೆ ಪೂಜೆ ಸಲ್ಲಿಸುತ್ತಿದ್ದರು.
ರಜಾ ದಿನವಾದ ಪರಿಣಾಮ ಬಸ್ಸು, ದೇವಸ್ಥಾನಗಳಲ್ಲಿ ಭಕ್ತರ ದಂಡು ತುಂಬಿತ್ತು. ನಾಗರ ಪಂಚಮಿಗೆ ಎಳನೀರು ಮತ್ತು ಕೇದಗೆ ಹೂವಿಗೆ ಭಾರಿ ಬೇಡಿಕೆಯಿದ್ದ ಪರಿಣಾಮ ವ್ಯಾಪಾರಿಗಳಿಂದ ಗ್ರಾಹಕರು ದುಪ್ಪಟ್ಟು ಬೆಲೆ ನೀಡಿ ಖರೀದಿಸುತ್ತಿದ್ದರು.
ನಾಗನಿಗೇ ಮೋಸ: ಕೇದಗೆ ಹೂವಿನ ಬದಲು ಮುಂಡೇವು ಗರಿ ಮಾರಾಟ ಮಾಡಲಾಗುತ್ತಿದ್ದು, ಜನರು ಒಂದು ಗರಿ ರು. 50-60 ನೀಡಿ ಮೋಸ ಹೋದ ಘಟನೆ ನಡೆದಿದೆ. ನಗರದ ಕಾರ್ಸ್ಟ್ರೀಟ್, ಕದ್ರಿ, ಮಂಗಳಾದೇವಿ, ಸ್ಟೇಟ್ಬ್ಯಾಂಕ್ಗಳಲ್ಲಿ ಕೇದಗೆ ಗರಿ ಬದಲು ಅದರಂತೆಯೇ ಕಾಣುವ ಮುಂಡೇವು ಗಿಡದ ಗರಿ ನೀಡಿ ವ್ಯಾಪಾರಿಗಳು ಭಕ್ತರನ್ನು ವಂಚಿಸುತ್ತಿದ್ದರು. ಕೇದಗೆಯಂತೆ ಕಂಡರೂ ಮುಂಡೇವು ಗರಿಗೆ ವಾಸನೆ ಇಲ್ಲ. ಇದನ್ನು ಗಮನಿಸದ ಭಕ್ತರು ಮುಂಡೇವು ಗರಿ ಖರೀದಿಸಿ ಮೋಸ ಹೋಗಬೇಕಾಯಿತು.
ವಳಲಂಬೆಯಲ್ಲಿ ನಾಗರ ಪಂಚಮಿ: ಪ್ರಸಿದ್ಧ ನಾಗ ಕ್ಷೇತ್ರ ಗುತ್ತಿಗಾರಿನ ವಳಲಂಬೆ ಶಂಖಪಾಲ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಾಗರ ಪಂಚಮಿಯ ವಿಶೇಷ ದಿನವಾದ ಭಾನುವಾರ ನಾಗ ಶಿಲೆಗೆ ಹಾಲಿನ ಅಭಿಷೇಕ, ತಂಬಿಲ ಮತ್ತು ವಿಶೇಷ ಪೂಜೆನಡೆದವು.
ಶ್ರಾವಣ ನಕ್ಷತ್ರದ ಶ್ರಾವಣ ಮಾಸದ ಈ ನಾಗರ ಪಂಚಮಿಯ ವಿಶೇಷವೆಂದರೆ ಆಟಿಯ ಸಮಯದಲ್ಲಿ ಯಾವುದೇ ಪೂಜೆ ಮತ್ತು ಕಾರ್ಯಕ್ರಮ ನಡೆಯುವುದಿಲ್ಲ. ಆದರೆ ಈ ನಾಗರಪಂಚಮಿ ಆಟಿಯ ಸಮಯದಲ್ಲಿ ನಡೆದಿರುವುದು ವಿಶೇಷ.
ಸಮಸ್ಯೆ ಪರಿಹಾರ ನಂಬಿಕೆ: ಗುತ್ತಿಗಾರಿನ ವಳಲಂಬೆ ಶಂಖಪಾಲ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಾಗರ ಪಂಚಮಿಯಂದು ಹಾಲೆರೆದರೆ ಸಂತಾನ ಭಾಗ್ಯ, ಚರ್ಮವ್ಯಾಧಿ, ರೋಗಗಳು ವಾಸಿಯಾಗುತ್ತವೆ ಎಂದು ನಂಬಲಾಗುತ್ತದೆ. ಶ್ರೀಕ್ಷೇತ್ರ ಶಂಖಪಾಲ ಸುಬ್ರಹ್ಮಣ್ಯದಲ್ಲಿ ಪವಿತ್ರ ನದಿಯಲ್ಲಿ ಮಿಂದು ದೇವಸ್ಥಾನಕ್ಕೆ ಮೂರು ಸುತ್ತು ಬಂದು, ದೇವರಿಗೆ ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದರೆ ಯಾವುದೇ ರೋಗ ರುಜಿನ ಮತ್ತು ಇನ್ನಿತರ ವ್ಯಾಧಿಗಳು ಪರಿಹಾರವಾಗುತ್ತವೆ ಎನ್ನುವ ನಂಬಿಕೆ ಇದೆ.
ಶ್ರೀಕ್ಷೇತ್ರದಲ್ಲಿ ಭಾನುವಾರ ನಾಗನ ಮೂರ್ತಿ ಬಿಡಿಸಿ ಸಾಲಿಗ್ರಾಮ ತೀರ್ಥ, ದ್ರವ್ಯ, ಫಲ, ಹಿಂಗಾರ, ಅರಶಿನ, ತಂಬಿಟ್ಟು, ಎಳನೀರು ಪೂಜಾದ್ರವ್ಯಗಳನ್ನಿಟ್ಟು ನಾಗನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ನಿಡಿಗಲ್ಲಿನಲ್ಲಿ ನಾಗಪೂಜೆ: ಬೆಳ್ತಂಗಡಿಯ ನಿಡಿಗಲ್ಲು ಶ್ರೀ ಶಾಂತಿನಾಥ ಸ್ವಾಮಿ ಬಸದಿಯ ಹೊರಾಂಗಣದ ಬಲಭಾಗದಲ್ಲಿ ಶ್ರೀ ನಾಗದೇವರ ಸನ್ನಿಧಿ ಇದ್ದು ಭಾನುವಾರ ನಾಗರ ಪಂಚಮಿಯ ದಿನದಂದು ಇಲ್ಲಿಗೆ ಉಜಿರೆ ಹಾಗೂ ನಿಡಿಗಲ್ಲು ಗ್ರಾಮದ ಶ್ರಾವಕ ಶ್ರಾವಿಕೆಯರು ಮತ್ತು ಜೈನೇತರರು ಆಗಮಿಸಿ ನಾಗದೇವರಿಗೆ ಪೂಜೆ ಸಲ್ಲಿಸಿ ಹಾಲನ್ನು ಎರೆದರು.
ಉಪ್ಪಿನಂಗಡಿ ಸುತ್ತಮುತ್ತ ನಾಗರಪಂಚಮಿ: ಉಪ್ಪಿನಂಗಡಿ, ನೆಲ್ಯಾಡಿ, ಕಡಬ ಸುತ್ತಮತ್ತ ಭಾನುವಾರ ನಾಗರ ಪಂಚಮಿಯನ್ನು ಶ್ರದ್ಧಾ ಭಕ್ತಿಯೊಂದಿಗೆ ಆಚರಿಸಲಾಯಿತು.
ಉಪ್ಪಿನಂಗಡಿಯ ನೇತ್ರಾವತಿ- ಕುಮಾರಾಧಾರ ನದಿ ತಟದಲ್ಲಿರುವ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ನಾಗಬನದಲ್ಲಿ ವೈದಿಕೆ ವಿಧಿ ವಿಧಾನಗಳೊಂದಿಗೆ ಕ್ಷೀರಾಭಿಷೇಕ, ಸಿಯಾಳಾಭಿಷೇಕ, ಅರಿಶಿನ ಹುಡಿಯ ಅಭಿಷೇಕದೊಂದಿಗೆ ವಿಶೇಷ ಪೂಜೆ ನಡೆಯಿತು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ದೇವಸ್ಥಾನಕ್ಕೆ ಆಗಮಿಸಿದರು.
ಲಕ್ಷ್ಮಿವೆಂಕಟರಮಣ ದೇವಾಲಯದ ವನಭೋಜನದಲ್ಲಿರುವ ನಾಗಬನದಲ್ಲೂ ನೂರಾರು ಭಕ್ತರ ಸಮ್ಮುಖದಲ್ಲಿ ಅಭಿಷೇಕಾದಿ ಪೂಜೆಗಳು ನೆರವೇರಿದವು.
ಆಲಂಕಾರು, ನೆಲ್ಯಾಡಿ, ಕೊಕ್ಕಡ, ಶಿಶಿಲ, ಶಿಬಾಜೆ, ಕಡಬ ಮೊದಲಾದ ಪ್ರದೇಶಗಳಲ್ಲಿ ದೇವಾಲಯದ ನೆಲೆಯಲ್ಲಿರುವ ನಾಗಬನದಲ್ಲಿ ಸಾಮೂಹಿಕ ನೆಲೆಯಲ್ಲಿ ನಾಗಾರಾಧನೆ ನಡೆದರೆ, ಕೌಟುಂಬಿಕವಾಗಿ ಕೇಂದ್ರಿಕೃತವಾದ ಹಲವಾರು ಕಡೆಗಳಲ್ಲಿ ಕುಟುಂಬ ಸದಸ್ಯರು ಒಗ್ಗೂಡಿ ನಾಗರಾಧನೆಯನ್ನು ನೆರವೇರಿಸಿದರು.
ತೋಕೂರಿನಲ್ಲಿ ನಾಗಾರಾಧನೆ: ನಾಗರಪಂಚಮಿ ಪ್ರಯುಕ್ತ ಹಳೆಯಂಗಡಿ ಸಮೀಪದ ತೋಕೂರಿನ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ನಾಗದೇವರಿಗೆ ತನು ತಂಬಿಲ ಸೇವೆ ಜರುಗಿತು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ಅದೇ ರೀತಿ ಕಿನ್ನಿಗೋಳಿಯ ಶ್ರೀ ರಾಮ ಮಂದಿರದಲ್ಲೂ ನಾಗರಪಂಚಮಿ ಆಚರಿಸಲಾಯಿತು.
ಬಂಟ್ವಾಳ- ವಿವಿಧೆಡೆ ನಾಗಾರಾಧನೆ: ಬಿ.ಸಿ. ರೋಡಿನ ಶ್ರೀ ಅನ್ನಪೂರ್ಣೇಶ್ವರಿ ನಾಗದೇವರ ದೇವಸ್ಥಾನ, ಶ್ರೀ ಚಂಡಿಕಾಪರಮೇಶ್ವರಿ ದೇವಸ್ಥಾನ ಹಾಗೂ ಶ್ರೀ ರಕ್ತೇಶ್ವರಿ ದೇವಸ್ಥಾನದ ನಾಗ ಸನ್ನಿಧಿಯಲ್ಲಿ ಭಾನುವಾರ ನಾಗರ ಪಂಚಮಿಯನ್ನು ಭಕ್ತಿಯಿಂದ ಆಚರಿಸಲಾಯಿತು. ಭಕ್ತರು ನಾಗನಿಗೆ ಹಾಲು, ಎಳನೀರು ಅಭಿಷೇಕ ಮಾಡಿದರು.
ಸುಳ್ಯದಲ್ಲಿ ನಾಗರಪಂಚಮಿ: ತಾಲೂಕಿನ ವಿವಿಧ ದೇವಾಲಯಗಳಲ್ಲಿ ನಾಗರಪಂಚಮಿಯನ್ನು ಸೋಮವಾರ ಭಕ್ತಿ, ಶ್ರದ್ಧೆ, ಸಡಗರದಿಂದ ಆಚರಿಸಲಾಯಿತು.
ಸುಳ್ಯದ ರಾಮ ಭಜನಾ ಮಂದಿರ, ವಳಲಂಬೆ ಶ್ರೀ ಶಂಖಪಾಲ ದೇವಸ್ಥಾನ, ಕೇರ್ಪಳ, ನಾಗಪಟ್ಟಣ ಶ್ರೀ ಸದಾಶಿವ ದೇವಸ್ಥಾನ, ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ನಾಗರಪಂಚಮಿಯನ್ನು ಸಡಗರದಿಂದ ಆಚರಿಸಲಾಯಿತು.
ಆಲೆಟ್ಟಿ ಶ್ರೀಸದಾಶಿವ ದೇವಸ್ಥಾನದ ನಾಗ ಸನ್ನಿಧಿಯಲ್ಲಿ ಹಾಲಿನ ಅಭಿಷೇಕವು ಪ್ರಧಾನ ಅರ್ಚಕ ಸುಪ್ರೀಂ ಭಟ್ ನೇತೃತ್ವದಲ್ಲಿ  ನಡೆಯಿತು. ಸುಬ್ರಾಯ ಭಟ್ ಸಹಕರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.