ದಕ್ಷಿಣ ಕನ್ನಡ

180 ಜೋಡಿಗೆ ಕಂಕಣಭಾಗ್ಯ

Published On :

ಬೆಳ್ತಂಗಡಿ: ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಗುರುವಾರ 42ನೇ ಉಚಿತ ಸಾಮೂಹಿಕ ವಿವಾಹ 6.48ರ ಗೋಧೋಳಿ ಲಗ್ನದಲ್ಲಿ ನಡೆದು, 180 ಜೋಡಿಗಳು ವಿವಾಹ ಮಂತ್ರ, ಮಂಗಲ ವಾದ್ಯಗಳ ಭಾವನಾತ್ಮಕ ವಾತಾವರಣದಲ್ಲಿ ಸತಿಪತಿಗಳಾದರು.
ಕ್ಷೇತ್ರದ ಪರಂಪರೆಯಾಗಿ ಪರಿವರ್ತನೆಯಾಗಿರುವ ಈ ಸಮಾರಂಭದಲ್ಲಿ ನ್ಯಾಯಮೂರ್ತಿಗಳು, ಚಲನಚಿತ್ರ ನಟರು, ಉದ್ಯಮಿಗಳು, ಧರ್ಮಾಧಿಕಾರಿಗಳು ಉಪಸ್ಥಿತರಿದ್ದು, ನೂತನ ವಧೂವರರಿಗೆ ಶುಭ ಹಾರೈಸಿದರು.
ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಎಚ್. ಬಿಲ್ಲಪ್ಪ ಮಾತನಾಡಿ, ಎಲ್ಲ ವ್ಯಕ್ತಿಗಳು ಸಮಾನ ಜೀವನ ಕಾಣುವಂತಾಗಬೇಕು. ಶ್ರೀ ಕ್ಷೇತ್ರ ಇದಕ್ಕೆ ಪೂರಕ ಕಾರ್ಯ ಮಾಡುತ್ತಿದೆ. ಇಲ್ಲಿನ ಆದರ್ಶ ಎಲ್ಲ ಕಡೆ ಪಾಲನೆಯಾಗಬೇಕು ಎಂದು ಆಶಿಸಿದರು.
ಬಿರ್ಲಾ ಸಮೂಹದ ಸಿಮೆಂಟ್ ಘಟಕದ ಆಡಳಿತಾಧ್ಯಕ್ಷ ಜಿ.ಜಯರಾಮನ್ ಮಾತನಾಡಿ, ವಿವಾಹ ಎಂಬುದು ಜೀವನದ ಅತ್ಯಂತ ಪವಿತ್ರ ಮತ್ತು ಗುರುತರವಾದ ಸಂಬಂಧ ಎಂದರಲ್ಲದೆ, ರಾಮಾಯಣದ ರಾಮ- ಸೀತೆ ಬದುಕನ್ನು ಉದಾಹರಿಸಿದರು.
ಕನ್ನಡ ಚಲನಚಿತ್ರ ನಟ ದೇವರಾಜ್ ಮಾತನಾಡಿ, ಕೋಟಿ ಹಣ ಖರ್ಚು ಮಾಡಿದರೂ ಇಲ್ಲಿ ನಡೆಯುವಂತಹ ಇಂಥಹ ಮದುವೆ ನೋಡುವ ಭಾಗ್ಯ ಸಿಗಲಾರದು. ಮಾನವ ಕಲ್ಯಾಣಕಾರಕ ಮದುವೆ ಇಲ್ಲಿ ನಡೆದಿದೆ. 42 ವರ್ಷಗಳ ಹಿಂದೆ ಇಲ್ಲಿ ಮದುವೆಯಾದವರ ಮಕ್ಕಳು, ಮೊಮ್ಮಕ್ಕಳು ಇಲ್ಲಿ ವಿವಾಹಬಂಧನಕ್ಕೊಳಗಾಗುತ್ತಿರುವ ಸಂದರ್ಭ ಬೇರೆ ಎಲ್ಲಿ ಸಿಗಬೇಕು ಎಂದು ಹರ್ಷ ವ್ಯಕ್ತಪಡಿಸಿದರು.
ಸಂಬಂಧ ವಿಮುಖ ಸಮಾಜ- ಹೆಗ್ಗಡೆ ವಿಷಾದ: ಅಧ್ಯಕ್ಷತೆ ವಹಿಸಿದ್ದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ಸಿನಿಮಾ, ಟಿವಿ ಮಾಧ್ಯಮಗಳಿಂದ ಧರ್ಮ, ಅರ್ಥ, ಕಾಮದ ಅರ್ಥವೇ ಅನರ್ಥವಾಗಿದೆ. ಈ ತ್ರಿವರ್ಗದ ಪಾಲನೆಯನ್ನು ಯಾವ ರೀತಿ ಮಾಡುವುದು, ಮೌಲ್ಯಗಳನ್ನು ಬೆಳೆಸಿಕೊಳ್ಳುವುದು ಹೇಗೆ ಎಂಬುದನ್ನು ಮಾಧ್ಯಮಗಳು ತಿಳಿಸುತ್ತಿಲ್ಲದಿರುವುದು ವಿಷಾದನೀಯ. ಮದುವೆಯಾದ ಬಳಿಕ ಈ ಸಂಬಂಧವನ್ನು ಹೇಗೆ ಉಳಿಸಿ ಬೆಳೆಸಿಕೊಳ್ಳಬೇಕೆಂಬ ಗಂಭೀರ ವಿಚಾರದಿಂದ ವಿಮುಖವಾದ ಸಮಾಜ ಬೆಳೆಯುತ್ತಾ ಇದೆ ಎಂದು ವಿಷಾದ ವ್ಯಕ್ತಪಡಿಸಿದರು.
 ಶ್ರೀಮತಿ ಬಿಲ್ಲಪ್ಪ, ಮೀನಾಕ್ಷಿ ಜಯರಾಮನ್, ಚಂದ್ರಲೇಖಾ ದೇವರಾಜ್, ಹರ್ಷೇಂದ್ರ ಕುಮಾರ್, ಸುರೇಂದ್ರ ಕುಮಾರ್ ಇದ್ದರು. ಡಾ.ಇ. ಮಹಾಬಲ ಭಟ್ ಸ್ವಾಗತಿಸಿ, ನಿರೂಪಿಸಿದರು. ಶ್ರೀನಿವಾಸ ರಾವ್ ವಂದಿಸಿದರು.

ವಧೂ ವರರ ಮೆರವಣಿಗೆ
ವಧೂ- ವರರನ್ನು ಭವ್ಯವಾದ ಮೆರವಣಿಗೆಯಲ್ಲಿ ಕರೆತರಲಾಯಿತು. ವಧೂವರರಿಗೆ ಕರಿಮಣಿ ತಾಳಿ, ಸೀರೆ, ರವಿಕೆ, ಕಣ, ಶಾಲು, ಧೋತಿ, ಶರ್ಟ್ಫೀಸ್ಗಳನ್ನು ಅತಿಥಿಗಳು ವಿತರಿಸಿದರು. ಒಂದು ಜೋಡಿಗೆ ರು. 9,400 ಖರ್ಚು ತಗುಲಿದೆ. ಧ.ಗ್ರಾ.ಯೋಜನೆ ಸಿಬ್ಬಂದಿಗಳಾದ ಶಿಗ್ಗಾಂವ್ನ ರೇವಣ ಸಿದ್ದಪ್ಪ ಮತ್ತು ರೇಣುಕಾ 11501ನೇ ಜೋಡಿಯಾಗಿ ಹಸೆಮಣೆ ಏರಿದರು. ದ.ಕ. ಜಿಲ್ಲೆಯಿಂದ 39, ಉಡುಪಿಯಿಂದ 39, ಚಿಕ್ಕಮಗಳೂರು 11, ಶಿವಮೊಗ್ಗ 19, ಹಾಸನ 7, ಬೆಂಗಳೂರು 5, ಮೈಸೂರು 10, ಹಾವೇರಿ 6, ಬೆಳಗಾವಿ 2, ಕೊಡಗು 3, ದಾವಣಗೆರೆ 3, ಧಾರವಾಡ 7, ಉತ್ತರ ಕನ್ನಡ 12, ಚಿತ್ರದುರ್ಗ 2 ಹಾಗೂ ಮಂಡ್ಯ, ಕೊಪ್ಪಳ, ಬಾಗಲಕೋಟೆ ಮತ್ತು ಚಾಮರಾಜನಗರ ಜಿಲ್ಲೆಗಳಿಂದ ತಲಾ 3 ಜೋಡಿಗಳು ಹಾಗೂ ಕೇರಳದಿಂದ 11 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಪ್ರೀತಿಗೆ ಹೆತ್ತವರ ವಿರೋಧ: ಪ್ರೇಮಿ ಜೋಡಿ ಆತ್ಮಹತ್ಯೆ
ಮಂಗಳೂರು: ಪ್ರೇಮಿಗಳಿಬ್ಬರು ಪ್ರತ್ಯೇಕವಾಗ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರು ಹೊರವಲಯದ ಬಡಗಎಡಪದವು ಮತ್ತು ಸುರತ್ಕಲ್ನ ಮುಕ್ಕ ಎಂಬಲ್ಲಿ  ನಡೆದಿದೆ.  ಹೆತ್ತವರು ಪ್ರೇಮಕ್ಕೆ ವಿರೋಧಿಸಿದ ಹಿನ್ನೆಲೆಯಲ್ಲಿ ಆತ್ಯಹತ್ಯೆ ಮಾಡಿಕೊಂಡಿದ್ದಾರೆ. ಬಡಗುಎಡಪದವು ಮನೆಯ ಶೈಲೇಶ್ (19) ಮತ್ತು ಪಕ್ಕದ ಮನೆಯ ಸುಮಲಳನ್ನು ಪ್ರೀತಿಸುತ್ತಿದ್ದ. ಈ ವಿಚಾರ ಸುಮಲಳ ಮನೆಯವರಿಗೆ ಗೊತ್ತಾಗಿ ಗಲಾಟೆಯಾಗಿತ್ತು. ಇದರಿಂದ ನೊಂದ ಸುಮಲ ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಳು. ಇದರಿಂದ ಅತೀವ ಬೇಸರಗೊಂಡಿದ್ದ ಶೈಲೇಶ್ ತನ್ನ ಅಜ್ಜಿಮನೆಯಾದ ಸುರತ್ಕಲ್ ಮುಕ್ಕದ ದೊಂಬೇಲ್ಗೆ ಬುಧವಾರ ರಾತ್ರಿ 10 ಗಂಟೆಗೆ ಬಂದಿದ್ದ. ಊಟ ಮಾಡಿ 10.30ಕ್ಕೆ ಕೋಣೆಗೆ ಹೋಗಿ ಮಲಗಿದ್ದ. ಮರುದಿನ ಬೆಳಗ್ಗೆ 8 ಗಂಟೆಯಾದರೂ ಏಳದಿರುವುದನ್ನು ನೋಡಿ ಮಾವ ದೇವಿದಾಸ್  ಬಾಗಿಲು ತಟ್ಟಿದ್ದಾರೆ. ಮೊಬೈಲ್ ರಿಂಗ್ ಕೂಡಾ ಮಾಡಿದರೂ ಏಳದ ಹಿನ್ನೆಲೆಯಲ್ಲಿ ಸಂಶಯ ಬಂದು ಬಾಗಿಲು ಒಡೆದು ತೆಗೆದಾಗ ಶೈಲೇಶ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂತು. ಸುಮಲ ಆತ್ಮಹತ್ಯೆ ಪ್ರಕರಣ ಬಜಪೆ ಠಾಣೆಯಲ್ಲಿ ದಾಖಲಾಗಿದ್ದು, ಶೈಲೇಶ್ ಆತ್ಮಹತ್ಯೆ ಪ್ರಕರಣ ಸುರತ್ಕಲ್ ಠಾಣೆಯಲ್ಲಿ ದಾಖಲಾಗಿದೆ.   

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.