ಕೆಳಮಟ್ಟದ ಟೀಕೆ ಸರಿಯಲ್ಲ
ಸಿದ್ದಾಪುರ: ತಮ್ಮ ಬದುಕಿನಲ್ಲಿ ಮತ್ತು ಈವರೆಗಿನ ರಾಜಕೀಯ ಜೀವನದಲ್ಲಿ ಯಾವುದೇ ವಾಮಮಾರ್ಗ ಬಳಸಿರದ ಕಾಂಗ್ರೆಸ್ ಧುರೀಣ ಆರ್.ವಿ. ದೇಶಪಾಂಡೆಯವರ ಕುರಿತಾಗಿ ವಿರೋಧ ಪಕ್ಷಗಳು ಸುಖಾಸುಮ್ಮನೆ ಆರೋಪ ಮಾಡುತ್ತಿವೆ. ಅಸಭ್ಯ ಭಾಷೆಯಲ್ಲಿ ಬಿಜೆಪಿ ವಕ್ತಾರರು ಮಾಡುತ್ತಿರುವ ಆರೋಪ, ಅವರ ಅತಿರೇಕದ ಮಾತುಗಳನ್ನು ಖಂಡಿಸುತ್ತೇನೆ ಮತ್ತು ಅವರು ತಾವು ಆಡಿದ ಮಾತುಗಳನ್ನು ಹಿಂದಕ್ಕೆ ಪಡೆಯಬೇಕು ಎಂದು ಕಾಂಗ್ರೆಸ್ ವಕ್ತಾರ ಪ್ರಮೋದ ಹೆಗಡೆ ಆಗ್ರಹಿಸಿದರು.
ಅವರು ಇಲ್ಲಿನ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ವಕ್ತಾರರು ಆರ್.ವಿ. ದೇಶಪಾಂಡೆಯವರು ಅಧಿಕಾರ ದುರುಪಯೋಗ ಮತ್ತು ಗೂಂಡಾಗಿರಿ ಮಾಡುತ್ತಿದ್ದಾರೆ ಎಂದು ಅಸಭ್ಯ ಭಾಷೆಯಲ್ಲಿ ಟೀಕೆ ಮಾಡಿದ್ದಾರೆ. ಆರೋಪ ಪ್ರತ್ಯಾರೋಪಗಳು ಸಹಜವಾದರೂ ಇಂಥ ಕೆಳಮಟ್ಟದ ಟೀಕೆ ಸರಿಯಲ್ಲ ಎಂದರು. ನೀತಿ, ಪ್ರಣಾಳಿಕೆ, ಸಾಧನೆಗಳ ಆಧಾರದ ಮೇಲೆ ಮಾತನಾಡಲಿ. ಚುನಾವಣೆ ಸಮಯದಲ್ಲಿ ಸಹಜವಾಗಿ ಆರಕ್ಷಕ ಇಲಾಖೆ ರೌಡಿ ಶೀಟರ್ಗಳನ್ನು ವಿಚಾರಿಸುತ್ತಿದೆ. ಅದಕ್ಕೆ ಯಾವ ಕುಮ್ಮಕ್ಕು ಬೇಕಿಲ್ಲ ಎಂದರು. ಉತ್ತರ ಕನ್ನಡ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಶಾಂತ ದೇಶಪಾಂಡೆ ಗೆಲುವು ನಿಶ್ಚಿತ. ಯುವಕರಾಗಿರುವುದರ ಜೊತೆಗೆ ಉಚ್ಚ ಶಿಕ್ಷಣ ಪಡೆದವರು. ಅವರು ದೇಶಪಾಂಡೆಯವರ ಮಗ ಎನ್ನುವ ಕಾರಣಕ್ಕೆ ಟಿಕೆಟ್ ನೀಡಿಲ್ಲ. ಕಳೆದ 7 ವರ್ಷಗಳಲ್ಲಿ ತಮ್ಮ ಸಂಸ್ಥೆಯ ಮೂಲಕ ಕನಿಷ್ಠ 5 ಸಾವಿರ ಜನರಿಗೆ ನೆರವಾಗಿದ್ದಾರೆ. ಅಲ್ಲದೆ, ಅಂತಾರಾಷ್ಟ್ರಿಯ ಮಟ್ಟದ ವಕೀಲರೂ ಕೂಡ. ಕಳೆದ 9 ತಿಂಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೂಲಕ ಜಿಲ್ಲೆಗೆ ರು. 1 ಸಾವಿರ ಕೋಟಿ ಅಭಿವೃದ್ಧಿ ಅನುದಾನ ತಂದ ದೇಶಪಾಂಡೆಯವರ ವೇಗಕ್ಕೆ ಸ್ಪಂದಿಸಲು ಸಮರ್ಥ ಪ್ರತಿನಿಧಿಯ ಅಗತ್ಯವಿದ್ದು ಅದನ್ನು ಪ್ರಶಾಂತ ದೇಶಪಾಂಡೆ ಮಾಡುತ್ತಾರೆ ಎನ್ನುವ ವಿಶ್ವಾಸವಿದೆ ಎಂದರು. ಜಿಲ್ಲೆಯ ಅಭಿವೃದ್ಧಿಯಲ್ಲಿ ಆರ್.ವಿ. ದೇಶಪಾಂಡೆ ಇತಿಹಾಸ ನಿರ್ಮಿಸುವುದು ಖಂಡಿತ. ಬಿಜೆಪಿಯ ಇಬ್ಬರು ಸಚಿವರು ಮಾಡಲಾಗದ ಜಿಲ್ಲೆಯ ಮೆಡಿಕಲ್ ಕಾಲೇಜ್ ಮಂಜೂರಿಯನ್ನು ದೇಶಪಾಂಡೆ ತಂದಿದ್ದಾರೆ. ಪ್ರವಾಸೋದ್ಯಮಕ್ಕೆ ಈಗಾಗಲೇ ರು. 40 ಕೋಟಿ ಬಂದಿದೆ. ರು. 50 ಕೋಟಿಗೂ ಮಿಕ್ಕಿದ ಮೊತ್ತದ 3 ಸೇತುವೆಗಳ ನಿರ್ಮಾಣಕ್ಕೆ ಮಂಜೂರಾತಿ ತಂದಿದ್ದಾರೆ ಎಂದರು.
ಪಕ್ಷದ ಗೆಲುವೇ ಮುಖ್ಯ: ನಾವು ಕಾಂಗ್ರೆಸ್ ಸಿದ್ಧಾಂತ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಾಧನೆ, ಕಾರ್ಯಕ್ರಮ ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತೇವೆ. ಪಕ್ಷದಲ್ಲಿ ಯಾವುದೇ ಭಿನ್ನಮತ ಇಲ್ಲ. ಪಕ್ಷದ ಗೆಲುವೇ ಮುಖ್ಯ ಎಂದ ಅವರು, ಅಭ್ಯರ್ಥಿ ಆಕಾಂಕ್ಷಿಯಾಗಿದ್ದ ನಿವೇದಿತ ಆಳ್ವ ಕೂಡ ತಮ್ಮ ಫೇಸ್ಬುಕ್ನಲ್ಲಿ ಪಕ್ಷದ ಅಭ್ಯರ್ಥಿಗೆ ಬೆಂಬಲಿಸುವುದಾಗಿ ತಿಳಿಸಿದ್ದಾರೆ ಎಂದರು.
ಕಾಂಗ್ರೆಸ್ ಧುರೀಣ ಎಸ್.ಬಿ. ಗೌಡ ಕಲ್ಲೂರ ಮಾತನಾಡಿ, ದೇಶಪಾಂಡೆ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಜೆಡಿಎಸ್ ಅಭ್ಯರ್ಥಿ ಶಿವಾನಂದ ನಾಯ್ಕ ಆರೋಪಿಸಿದ್ದು, ಅವರಿಗೆ ನೈತಿಕತೆಯಾದರೂ ಎಲ್ಲಿದೆ? ಪಕ್ಷಾಂತರಿಗಳಾದ ಅವರು ಕಾಂಗ್ರೆಸ್ ಸೇರಲು ಮುಂದಾಗಿದ್ದರು. ತಾಂತ್ರಿಕ ಕಾರಣದಿಂದ ದೂರವಾದರು. ಅವರಿಗೆ ನಿಜಕ್ಕೂ ಪ್ರಶ್ನೆ ಮಾಡುವ ನೈತಿಕ ಶಕ್ತಿ ಇಲ್ಲ ಎಂದರು. ಗೋಷ್ಠಿಯಲ್ಲಿ ಬ್ಲಾಕ್ ಅಧ್ಯಕ್ಷ ಕೆ.ಜಿ. ನಾಗರಾಜ್, ಪಕ್ಷದ ಧುರೀಣರಾದ ಈಶ್ವರ ನಾಯ್ಕ ಮನಮನೆ, ಮೆಹಬೂಬ ಅಲಿ, ಮಾರುತಿ ಕಿಂದ್ರಿ, ಡಿ.ಜಿ. ಹೆಗಡೆ ಅಬ್ರಿಮನೆ, ಕರೀಂ ಸಾಬ್, ಎಂ.ಎನ್. ಹೆಗಡೆ, ವೆಂಕಟೇಶ ಹೊನ್ನೆಗುಂಡಿ, ಕೆ.ಟಿ. ಹೊನ್ನೆಗುಂಡಿ ಮುಂತಾದವರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

