ಮತಲೋಕದಲಿ ಎಮಗಾರು ಹಿತವರು?

Published On :
ಕನ್ನಡಪ್ರಭ ಪ್ರತಿನಿಧಿಯಿಂದ
ನವದೆಹಲಿ: ಮತದಾನ ಮಾಡಿದ ಶಾಯಿಯ ಗುರುತು ಬೆರಳಲ್ಲಿ ಮಾಸುವ ಮುನ್ನವೇ ದೆಹಲಿ ಮತದಾರರು ಮತ್ತೊಂದು ಮತದಾನಕ್ಕೆ ಸಿದ್ಧವಾಗುತ್ತಿದ್ದಾರೆ. ಏ.10ರಂದು ರಾಷ್ಟ್ರ ರಾಜಧಾನಿಯಲ್ಲಿ ಜನರು ಲೋಕಸಭೆಗಾಗಿ ಮತಹಾಕಲಿದ್ದಾರೆ. ಆಮ್ ಆದ್ಮಿಗೆ ಅಧಿಕಾರ ನೀಡಿದ ರಾಜಧಾನಿಯ ಮತದಾರರು ನಿಜಕ್ಕೂ ಗೊಂದಲದಲ್ಲಿರುವಂತಿದೆ. ಕೊಟ್ಟ ಅಧಿಕಾರ ಬಿಟ್ಟು ಹೋದ ಆಪ್ ಬೆಂಬಲಿಸಬೇಕೆ, ಹಗರಣಗಳ ಸುಳಿಯಲ್ಲಿ ಸಿಲುಕಿರುವ ಕಾಂಗ್ರೆಸ್ ಕೈ ಹಿಡಿಯಬೇಕೆ, ಭ್ರಷ್ಟಾಚಾರರಹಿತ ಆಡಳಿತದ ಭರವಸೆ ನೀಡುತ್ತಿರುವ ಬಿಜೆಪಿಗೆ ಮತ್ತೆ ಅವಕಾಶ ನೀಡಬೇಕೆ? ನಾಲ್ಕು ತಿಂಗಳ ಹಿಂದೆ ನಡೆದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕ್ಷಿಪ್ರ ರಾಜಕೀಯ ಕ್ರಾಂತಿ ಮಾಡಿದ್ದ ಆಮ್ ಆದ್ಮಿ ಪಾರ್ಟಿ, ನರೇಂದ್ರ ಮೋದಿ ಅಲೆಯಲ್ಲಿ ತೇಲುತ್ತಿರುವ ಬಿಜೆಪಿ, ಸೋತು ಮತ್ತೆ ಚೇತರಿಸಿಕೊಳ್ಳುತ್ತಿರುವ ಕಾಂಗ್ರೆಸ್ ನಡುವೆ ದೆಹಲಿಯ ಎಲ್ಲ ಏಳೂ ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ. ಎಸ್ಪಿ, ಬಿಎಸ್ಪಿ ಸೇರಿದಂತೆ ಹಲವು ಪಕ್ಷಗಳ ಅಭ್ಯರ್ಥಿಗಳು ಕಣದಲ್ಲಿದ್ದರೂ ಇಲ್ಲಿ ನಗಣ್ಯ.
7 ಸ್ಥಾನಗಳಲ್ಲಿ ಗೆದ್ದಿದ್ದ ಕಾಂಗ್ರೆಸ್
2009ರ ಲೋಕಸಭಾ ಚುನಾವಣೆಯಲ್ಲಿ ಏಳೂ ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿದ್ದ ಕಾಂಗ್ರೆಸ್ಗೆ ಆಡಳಿತ ವಿರೋಧಿ ಶಾಪ ವಿಧಾನಸಭಾ ಚುನಾವಣೆಯಲ್ಲೇ ತಟ್ಟಿತ್ತು. ಅದರ ಬಿಸಿ ಇನ್ನೂ ಆರಿಲ್ಲ. ಆದರೆ, ತಾನು ಬೆಂಬಲ ನೀಡಿದ್ದ ಆಪ್ 49 ದಿನಗಳಲ್ಲಿ ನಡೆಸಿದ ಆಡಳಿತ ವೈಫಲ್ಯಗಳೇ ಕಾಂಗ್ರೆಸ್ಗೆ ಬಂಡವಾಳ. ಯುಪಿಎ ಸರ್ಕಾರ ಎರಡು ಅವಧಿಯಲ್ಲಿ ನೀಡಿದ ಮೆಟ್ರೋ ರೈಲು ಸೇರಿದಂತೆ ಮೂಲಸೌಲಭ್ಯಗಳನ್ನು ಮತದಾರರ ಮುಂದಿಟ್ಟು ಕಾಂಗ್ರೆಸ್ ಅಭ್ಯರ್ಥಿಗಳು ಮತ ಯಾಚಿಸುತ್ತಿದ್ದಾರೆ.
ಆಪ್ಗೇನಿದೆ?
ಭ್ರಷ್ಟಾಚಾರ ಮುಕ್ತ ಮತ್ತು ಪಾರದರ್ಶಕ ಆಡಳಿತ ನೀಡುವ ಧ್ಯೇಯದೊಂದಿಗೆ ಗದ್ದುಗೆ ಏರಿ ಇಳಿದಿರುವ ಆಪ್ ವಿಚಿತ್ರ ಲೆಕ್ಕಾಚಾರಗಳೊಂದಿಗೆ ಕಣಕ್ಕೆ ಇಳಿದಿದೆ. ಏಳು ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರಗಳಲ್ಲಿ ಪತ್ರಕರ್ತರನ್ನು ಕಣಕ್ಕಿಳಿಸಿದೆ. ಮಹಾತ್ಮಾ ಗಾಂಧಿ ಮೊಮ್ಮಗ ರಾಜ್ಮೋಹನ್ ಗಾಂಧಿ, ನಿವೃತ್ತ ಸೇನಾಧಿಕಾರಿ ಕ.ದೇವೇಂದರ್ ಸಿಂಗ್ ಆಪ್ ಅಭ್ಯರ್ಥಿಗಳು. 49 ದಿನ ನಡೆಸಿದ ಆಡಳಿತವನ್ನು ಮುಂದಿಟ್ಟುಕೊಂಡು ಆಪ್ ಮತ ಬೇಡುತ್ತಿದೆ.
ಮೋದಿ ಅಲೆಯೇ ಆಶ್ರಯ
ಬಿಜೆಪಿ ಇಲ್ಲಿ ಆಪ್ ಸರ್ಕಾರದ ವೈಫಲ್ಯ, ಕಾಂಗ್ರೆಸ್ ಭ್ರಷ್ಟಾಚಾರ ಮತ್ತು ಹಗರಣಗಳ ಜತೆಗೆ ಮೋದಿ ಮಂತ್ರ ಪಠಿಸುತ್ತಿದೆ. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ ಹರ್ಷವರ್ಧನ್ ಈಗ ಚಾಂದ್ನಿ ಚೌಕ್ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ನರೇಂದ್ರಮೋದಿಯನ್ನು ಪ್ರಧಾನಿ ಮಾಡಲು ಮತ ನೀಡಿ ಎಂದೇ ಮತ ಯಾಚಿಸುತ್ತಿದ್ದಾರೆ. ಬಿಜೆಪಿ ಉಳಿದ ಅಭ್ಯರ್ಥಿಗಳೂ ಅವರ ಹಾದಿಯಲ್ಲೇ ಇದ್ದಾರೆ. ಬಿಜೆಪಿ ಇಲ್ಲಿ ನೇರವಾಗಿ ನರೇಂದ್ರಮೋದಿ ಅವರನ್ನೇ ಅವಲಂಬಿಸಿದೆ.
ಪರಿಣಾಮ ಬೀರೀತೆ?
ಜಾಮಾ ಮಸೀದಿ ಧರ್ಮ ಗುರು ಸೈಯದ್ ಬುಖಾರಿ ಕಾಂಗ್ರೆಸ್ಗೆ ಮತ ನೀಡುವಂತೆ ತಮ್ಮ ಸಮುದಾಯದ ಜನರಿಗೆ ಮನವಿ ಮಾಡಿರುವುದು ಕಾಂಗ್ರೆಸ್ಗೆ ಅನುಕೂಲವಾಗಬಹುದು. ಮೋದಿ ಬಗ್ಗೆ ಮುಸ್ಲಿಂ ಸಮುದಾಯದಲ್ಲಿ ಹುಟ್ಟಿರುವ ಆತಂಕವನ್ನು ಮತವಾಗಿ ಪರಿವರ್ತಿಸಿಕೊಳ್ಳುವ ನಿಟ್ಟಿನಲ್ಲಿ ಕಾಂಗ್ರೆಸ್ ಬುಖಾರಿ ಮೊರೆ ಹೋಗಿತ್ತು. ವಿಧಾನಸಭಾ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಸಾಕಷ್ಟು ಮತದಾರರು ಆಪ್ಗೆ ಬೆಂಬಲ ನೀಡಿದ್ದರು. ಅವೆಲ್ಲವೂ ಸಾಂಪ್ರದಾಯಿಕ ಕಾಂಗ್ರೆಸ್ ಮತಗಳಾಗಿದ್ದವು. ಈಗ ಬುಖಾರಿ ಕೋರಿಕೆ ಮತವಾಗಿ ಪರಿವರ್ತನೆಯಾದರೆ ಕಾಂಗ್ರೆಸ್ ಒಂದೆರಡು ಕ್ಷೇತ್ರಗಳನ್ನಾದರೂ ತನ್ನದಾಗಿಸಿಕೊಳ್ಳಲು ಸಾಧ್ಯ.
ಪ್ರಚಾರ ಅಂತ್ಯ
ನವದೆಹಲಿ: ನವದೆಹಲಿ, ಬಿಹಾರ ಸೇರಿದಂತೆ 14 ರಾಜ್ಯಗಳ 92 ಲೋಕಸಭಾ ಕ್ಷೇತ್ರಗಳಿಗೆ ನಡೆಯುವ ಮೂರನೇ ಹಂತದ ಚುನಾವಣೆಯ ಪ್ರಚಾರ ಕಾರ್ಯ ಮಂಗಳವಾರ ಮುಕ್ತಾಯಗೊಂಡಿದೆ. ಇದೇ ದಿನ ಕೇಂದ್ರಾಡಳಿತ ಪ್ರದೇಶವಾದ ಅಂಡಮಾನ್ ನಿಕೋಬಾರ್ನಲ್ಲೂ ಕ್ಷೇತ್ರದಲ್ಲೂ ಮತದಾನ ನಡೆಯಲಿದೆ.
ಕಣದಲ್ಲಿರುವ ಅಭ್ಯರ್ಥಿಗಳು
ಕ್ಷೇತ್ರಕಾಂಗ್ರೆಸ್ಬಿಜೆಪಿ ಆಪ್
ಈಶಾನ್ಯ ದೆಹಲಿಜೈಪ್ರಕಾಶ್ ಅಗರ್ವಾಲ್ ಮನೋಜ್ ತಿವಾರಿಆನಂದ್ ಕುಮಾರ್
ವಾಯವ್ಯ ದೆಹಲಿಕೃಷ್ಣಾ ತೀರಥ್ಉದಿತ್ ರಾಜ್ರಾಖಿ ಬಿರ್ಲಾ
ಹೊಸದಿಲ್ಲಿ ಅಜಯ್ ಮಾಕನ್ ಮೀನಾಕ್ಷಿ ಲೇಖಿಆಶಿಶ್ ಖೇತಾನ್
ದಕ್ಷಿಣ ದೆಹಲಿರಮೇಶ್ ಕುಮಾರ್ರಮೇಶ್ ಬಿದೂರಿ ಕ.ದೇವೇಂದರ್ ಶೆರಾವತ್
ಚಾಂದನಿ ಚೌಕ್ಕಪಿಲ್ ಸಿಬಲ್ಹರ್ಷವರ್ಧನಆಶುತೋಶ್
ಪಶ್ಚಿಮ ದೆಹಲಿಮಹಾಬಲ ಮಿಶ್ರಸಿ. ಪರ್ವೇಶ್ ಶರ್ಮಾಜರ್ನೈಲ್ ಸಿಂಗ್
ಪೂರ್ವ ದೆಹಲಿಸಂದೀಪ್ ದೀಕ್ಷಿತ್ಮಹೇಶ್ ಗಿರಿರಾಜ್ ಮೋಹನ್ಗಾಂಧಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


