ನಕ್ಸಲ್ ದಾಳಿ: 3 ಯೋಧರ ಬಲಿ
ರಾಯ್ಪುರ: ಛತ್ತೀಸ್ಗಡದಲ್ಲಿ ಚುನಾವಣೆಗೆ ಇನ್ನೊಂದು ದಿನ ಬಾಕಿ ಇರುವಂತೆ ನಕ್ಸಲರ ನರ್ತನ ಆರಂಭವಾಗಿದೆ. ಭದ್ರತಾ ಪಡೆಗಳ ಮೇಲೆ ನಡೆದ ಎರಡು ಪ್ರತ್ಯೇಕ ದಾಳಿಯಲ್ಲಿ ಮೂವರು ಸಿಆರ್ಪಿಎಫ್ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಬಸ್ತಾರ್ ಜಿಲ್ಲೆಗೆ ಚುನಾವಣಾ ಕರ್ತವ್ಯ ಸಿಬ್ಬಂದಿಯನ್ನು ಬಿಟ್ಟುಬರುತ್ತಿದ್ದ ವೇಳೆ 100ಕ್ಕೂ ಹೆಚ್ಚು ನಕ್ಸಲೀಯರು ಸಿಆರ್ಪಿಎಫ್ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿದರು. ಈ ಘಟನೆಯಲ್ಲಿ ನಕ್ಸಲ್ ವಿರೋಧಿ ಪಡೆ ಕೋಬ್ರಾದ ಮೂವರು ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಬಿಜಾಪುರದಲ್ಲಿ ಇಬ್ಬರಿಗೆ ಗಾಯವಾಗಿದೆ.
ಪ.ಬಂಗಾಳ ಅಧಿಕಾರಿಗಳ ವರ್ಗ
ಕೋಲ್ಕತಾ: ಚುನಾವಣಾ ಆಯೋಗದ ಒತ್ತಡಕ್ಕೆ ಮಣಿದಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಏಳು ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಈ ಅಧಿಕಾರಿಗಳ ಸ್ಥಾನಕ್ಕೆ ಆಯೋಗ ಸೂಚಿಸಿದ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಚುನಾವಣೆ ಬಳಿಕ ವರ್ಗಾವಣೆ ಗೊಂಡಿರುವ ಅಧಿಕಾರಿಗಳನ್ನು ಮೊದಲಿನ ಸ್ಥಾನಕ್ಕೆ ನಿಯೋಜಿಸಲಾಗುವುದು ಎಂದು ಸರ್ಕಾರ ಹೇಳಿದೆ.
ದೀದಿ ಭಾಷಣ ಪರಿಶೀಲನೆ
ಕೋಲ್ಕತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಡೆಸುವ ಎಲ್ಲ ಚುನಾವಣಾ ರ್ಯಾಲಿಗಳ ಭಾಷಣಗಳನ್ನು ಪರಿಶೀಲಿಸಲು ಚುನಾವಣಾ ಆಯೋಗ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಅವರ ಎಲ್ಲ ಭಾಷಣಗಳ ಧ್ವನಿಮುದ್ರಿಕೆಗಳನ್ನು ಸಲ್ಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದೆ.
12ರಿಂದ ಪ್ರಧಾನಿ ಪ್ರಚಾರ
ಲಖನೌ: ಈ ತಿಂಗಳ 12ರಿಂದ ಪ್ರಧಾನಿ ಮನಮೋಹನ್ ಸಿಂಗ್ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಬಿಜೆಪಿ ಅಭ್ಯರ್ಥಿ ಮನೇಕಾ ಗಾಂಧಿ ಸ್ಪರ್ಧಿಸಿರುವ ಫಿಲಿಬಿಟ್ನಿಂದ ಅವರು ಪ್ರಚಾರ ಆರಂಭಿಸಲಿದ್ದಾರೆ. ಉ.ಪ್ರ.ದಲ್ಲಿ ನಡೆವ 6 ಹಂತಗಳ ಚುನಾವಣೆಯಲ್ಲಿ ಕೇವಲ ಕೆಲವು ರ್ಯಾಲಿಗಳಲ್ಲಿ ಸಿಂಗ್ ಮಾತನಾಡಲಿದ್ದಾರೆ.
ನೀಲಗಿರಿಗೆ ಬಿಜೆಪಿ ಅಭ್ಯರ್ಥಿ ಇಲ್ಲ
ಚೆನ್ನೈ: ತಮಿಳುನಾಡಿನ ನೀಲಗಿರಿ ಕ್ಷೇತ್ರದಿಂದ ಸ್ಪರ್ಧಿಸಿರುವ ಕೇಂದ್ರದ ಮಾಜಿ ಸಚಿವ ಎ.ರಾಜಾ ವಿರುದ್ಧ ಬಿಜೆಪಿ ಅಭ್ಯರ್ಥಿಯೇ ಇಲ್ಲ. ತಡವಾಗಿ ನಾಮಪತ್ರ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ಗುರುಮೂರ್ತಿಯವರ ಉಮೇದುವಾರಿಕೆ ತಿರಸ್ಕೃತಗೊಂಡಿತ್ತು. ಅದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಲು ಮದ್ರಾಸ್ ಹೈಕೋರ್ಟ್ ನಿರಾಕರಿಸಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಉಂಟಾಗಿದೆ.
ಸ್ವಾಮಿ ಆರೋಪ ಸುಳ್ಳು
ನವದೆಹಲಿ: ಅಮೃತಸರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕ್ಯಾ.ಅಮರಿಂದರ್ ಸಿಂಗ್ ನಾಮಪತ್ರ ಸಲ್ಲಿಕೆ ವೇಳೆ ವಿದೇಶಿ ಬ್ಯಾಂಕ್ ಖಾತೆಗಳ ವಿವರ ಒದಗಿಸಿಲ್ಲ ಎಂದು ಬಿಜೆಪಿ ನಾಯಕ ಡಾ.ಸುಬ್ರಹ್ಮಣ್ಯನ್ ಸ್ವಾಮಿ ಆರೋಪಿಸಿದ್ದಾರೆ. ಅವರ ಪತ್ನಿ ಪ್ರಣೀತ್ ಕೌರ್ ಮತ್ತು ಪುತ್ರ ರಣೀಂದರ್ ಸಿಂಗ್ ವಿದೇಶಿ ಬ್ಯಾಂಕ್ಗಳಲ್ಲಿ ಹೊಂದಿರುವ ಬ್ಯಾಂಕ್ ಖಾತೆ ವಿವರಗಳನ್ನು ಸ್ವಾಮಿ ಬುಧವಾರ ಬಹಿರಂಗಪಡಿಸಿದ್ದಾರೆ. ಸ್ವಾಮಿ ಮಾಡಿರುವ ಆರೋಪಗಳನ್ನು ಕ್ಯಾ.ಅಮರಿಂದರ್ ಸಿಂಗ್ ತಿರಸ್ಕರಿಸಿದ್ದಾರೆ
ಚು. ಮುಂದೂಡಿಕೆ ಅರ್ಜಿ ವಜಾ
ನವದೆಹಲಿ: ಉತ್ತರಪ್ರದೇಶದ ಗೌತಮಬುದ್ಧ ನಗರ ಕ್ಷೇತ್ರದ ಚುನಾವಣೆ ಮುಂದೂಡಬೇಕೆಂದು ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ. ಏ.10ರಂದು ಇಲ್ಲಿ ಮತದಾನ ನಡೆಯುತ್ತಿದೆ. ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ರಮೇಶ್ ಚಂದ್ ತೋಮರ್ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ರಂಜನಾ ಪ್ರಕಾಶ್ ದೇಸಾಯಿ ಮತ್ತು ನ್ಯಾ. ಮದನ್ ಬಿ.ಲೋಕುರ್ ನೇತೃತ್ವದ ಪೀಠ ಈ ಸಂದರ್ಭದಲ್ಲಿ ಇಂಥ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿತು.
ಕುಪ್ಪಂನಿಂದ ನಾಯ್ಡು ಕಣಕ್ಕೆ
ಹೈದರಾಬಾದ್: ಸೀಮಾಂಧ್ರ ವ್ಯಾಪ್ತಿಯ ರಾಜ್ಯಕ್ಕೆ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು ಕುಪ್ಪಂ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಚಿತ್ತೂರು ಜಿಲ್ಲೆಯಲ್ಲಿರುವ ಈ ಕ್ಷೇತ್ರವನ್ನು ಅವರು ಹಲವು ವರ್ಷಗಳಿಂದ ಪ್ರತಿನಿಧಿಸುತ್ತಿದ್ದಾರೆ.
ರಿಕ್ಷಾ ಚಾಲಕನಿಗೆ ಕೇಜ್ರಿ ಕ್ಷಮೆ
ನವದೆಹಲಿ: ಪ್ರಚಾರ ಸಂದರ್ಭದಲ್ಲಿ ತಮಗೆ ಕಪಾಳ ಮೋಕ್ಷ ಮಾಡಿದ ರಿಕ್ಷಾ ಚಾಲಕನನ್ನು ಕ್ಷಮಿಸಿರುವುದಾಗಿ ಆಪ್ ನಾಯಕ ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ. ಕೇಜ್ರಿವಾಲ್ ಅವರು ಬುಧವಾರ ಸುಲ್ತಾನ್ಪುರದಲ್ಲಿರುವ ಚಾಲಕನ ನಿವಾಸಕ್ಕೆ ಭೇಟಿ ನೀಡಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಚಾಲಕ, ಕೇಜ್ರಿವಾಲ್ ತನಗೆ ದೇವರು ಇದ್ದಂತೆ. ಅವರಿಗೆ ಹೊಡೆದು ನಾನು ತಪ್ಪು ಮಾಡಿದೆ ಎಂದು ಹೇಳಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

