ದೇಶ

ಪವರ್‌ಲೆಸ್ ಪ್ರಶ್ನೆಗಳು

ಪವರ್‌ಲೆಸ್ ಪ್ರಶ್ನೆಗಳು
Published On :

ನವದೆಹಲಿ: ಪ್ರಧಾನಿ ಕಾರ್ಯಾಲಯದ ಪವರ್‌ಲೆಸ್ ಆಡಳಿತದ ಬಗ್ಗೆ ಪ್ರಧಾನಿ ಅವರ ಮಾಜಿ ಮಾಧ್ಯಮ ಸಲಹೆಗಾರ ಸಂಜಯ್ ಬಾರು ಬರೆದಿರುವ ಪುಸ್ತಕದ ಕುರಿತ ವಿವಾದದ ಕಿಡಿಗಳು ಇನ್ನಷ್ಟು ಎದ್ದಿವೆ.
ಸೋನಿಯಾ ಎಂಬ ಸೂಪರ್ ಪವರ್ ಮುಂದೆ ಪ್ರಧಾನಿ ಮಂಕಾಗಿದ್ದರು ಎಂದು ಸಂಜಯ್ ಬಾರು ಶನಿವಾರ ಆಂಗ್ಲ ವಾಹಿನಿಯೊಂದರ ಮುಂದೆ ಹೇಳಿದ್ದಾರೆ. ತಾವು ಬರೆದಿರುವ ಪುಸ್ತಕದಲ್ಲಿ ಎಷ್ಟು ಋಣಾತ್ಮಕ ಅಂಶಗಳಿವೆಯೋ ಅಷ್ಟೇ ಪಾಸಿಟಿವ್ ಸಂಗತಿಗಳೂ ಇವೆ ಎಂದಿದ್ದಾರೆ. ಆದರೆ ಮಾಧ್ಯಮಗಳು ಕೆಲವನ್ನಷ್ಟೇ ಹೆಕ್ಕಿ ತೆಗೆದಿವೆ ಎಂದಿದ್ದಾರೆ. ಇದೇ ವೇಳೆ ಸಂಜಯ್ ಬಾರು ಅವರ ಪುಸ್ತಕದಲ್ಲಿನ ಅಂಶಗಳನ್ನು ಚಿದಂಬರಂ ನಿರಾಕರಿಸಿದ್ದಾರೆ. ನಮ್ಮದು ಪಕ್ಷಾಧಾರಿತ ರಾಜಕಾರಣ. ಕೆಲವೊಂದು ವಿಚಾರಗಳು ಪಕ್ಷದ ಕಚೇರಿಯಲ್ಲೂ ನಿರ್ಧಾರವಾಗುತ್ತವೆ. ಹೀಗೆಂದರೆ, ಎಲ್ಲಾ ಅಂಶಗಳು ಅಲ್ಲೇ ಆಗುತ್ತವೆ ಎಂದಲ್ಲ ಎಂದು ಹೇಳಿದ್ದಾರೆ.
ಬಿಜೆಪಿ 5 ಪ್ರಶ್ನೆ: ಪ್ರಧಾನಿಗೆ ಪವರ್ ಇರಲಿಲ್ಲ ಎಂಬುದನ್ನು ನಾವು ಒಪ್ಪಲ್ಲ, ಹೀಗಂತ ಹೇಳುವುದೂ ಇಲ್ಲ ಎಂಬುದು ಬಿಜೆಪಿ ನಿಲುವು. ಇದಕ್ಕೆ ಅದು ಕಾರಣವನ್ನೂ ಕೊಟ್ಟಿದೆ. ಪಿಎಂಗೆ ಪವರ್ ಇಲ್ಲ ಎಂದು ಹೇಳಿದಲ್ಲಿ, ಪ್ರಧಾನಿ ಕಾರ್ಯಾಲಯಕ್ಕೆ ಅಗೌರವ ತೋರಿದಂತಾಗುತ್ತದೆ ಎಂದಿದೆ. ಆದರೆ ಪ್ರಧಾನಿಯನ್ನು ಸೋನಿಯಾ ಮತ್ತು ರಾಹುಲ್ ನಿಯಂತ್ರಿಸುತ್ತಿದ್ದರು ಎಂಬುದನ್ನು ಬಿಜೆಪಿ ಟೀಕಿಸಿದೆ. ಎಲ್ಲವೂ ಸೋನಿಯಾ ಕೈಯಲ್ಲೇ ನಿರ್ಧಾರವಾಗುತ್ತಿತ್ತು ಎಂದಾದಲ್ಲಿ ಭದ್ರತೆಯ ಸ್ಥಿತಿ ಏನಾಗಿತ್ತು ಎಂದು ಪ್ರಶ್ನಿಸಿದೆ. ಕೆಲವೊಂದು ರಹಸ್ಯಗಳು ಪ್ರಧಾನಿಗೆ ಬಿಟ್ಟು ಬೇರೆಯವರಿಗೆ ಗೊತ್ತಿರುವಂತಿಲ್ಲ. ಆದರೆ ಈ ಸಂಗತಿಗಳೆಲ್ಲಾ ಹೇಗೆ ಹೋಗುತ್ತಿದ್ದವು ಎಂದು ಸ್ಮೃತಿ ಇರಾನಿ ಪ್ರಶ್ನಿಸಿದ್ದಾರೆ. ý

ಅನೇಕ ಹಿರಿಯ 'ಕೈ' ನಾಯಕರಿಗೆ ಅಕ್ರಮ ಸಂಬಂಧ
ನವದೆಹಲಿ:
ರಾಹುಲ್ ಗಾಂಧಿ ಸೇರಿ ಅನೇಕ ಕಾಂಗ್ರೆಸ್ ಮುಖಂಡರು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಪತ್ನಿ ವಿಚಾರವಾಗಿ ನೀಡುತ್ತಿರುವ ಬಹಿರಂಗ ಹೇಳಿಕೆಗೆ ಬಿಜೆಪಿ ಹಿರಿಯ ಮುಖಂಡ ಅರುಣ್ ಜೇಟ್ಲಿ ತಿರುಗೇಟು ನೀಡಿದ್ದಾರೆ.
ಮೋದಿ ಬಗ್ಗೆ ಮಾತನಾಡುವ ರಾಹುಲ್ ಪಕ್ಷದ ಅನೇಕ ಹಿರಿಯ ಮುಖಂಡರಲ್ಲಿ ಎಷ್ಟು ಮಂದಿ ಅಕ್ರಮ ಸಂಬಂಧ ಹೊಂದಿದ್ದಾರೆ? ಎಷ್ಟು ಮಂದಿ ನಾಮಪತ್ರ ಸಲ್ಲಿಕೆ ವೇಳೆಯಷ್ಟೇ ಪತ್ನಿಯರ ಜತೆಗೆ ಪರೇಡ್ ಮಾಡುತ್ತಾರೆ ಎನ್ನುವುದು ನಮಗೆ ಗೊತ್ತಿಲ್ವಾ ಎಂದು ವ್ಯಂಗ್ಯವಾಡಿದ್ದಾರೆ ಜೇಟ್ಲಿ.
ಒಂದು ವೇಳೆ ಮೋದಿ ಪತ್ನಿ ಬಗ್ಗೆ ತಿಳಿದುಕೊಳ್ಳುವ ಹಕ್ಕು ಜನರಿಗಿದೆ ಎನ್ನುವುದಾದರೆ ಕಾಂಗ್ರೆಸ್ ಮುಖಂಡರ ಅಕ್ರಮ ಸಂಬಂಧಗಳ ಕುರಿತು ತಿಳಿದುಕೊಳ್ಳುವ ಹಕ್ಕೂ ಇದೆ. ಅಭ್ಯರ್ಥಿಯೊಬ್ಬನ ನೈತಿಕತೆಯ ದೃಷ್ಟಿಯಿಂದ ಮೋದಿಯ ಪತ್ನಿಗಿಂತ ಈ ಸಂಬಂಧದ ಕುರಿತು ತಿಳಿದುಕೊಳ್ಳುವುದು ಜನರಪಾಲಿಗೆ ಹೆಚ್ಚು ಪ್ರಸ್ತುತ ಎಂದು ಹೇಳುವ ಮೂಲಕ ಜೇಟ್ಲಿ ತಮ್ಮ ಬ್ಲಾಗ್‌ನಲ್ಲಿ ಕಾಂಗ್ರೆಸ್ ಮುಖಂಡರ ಕಾಲೆಳೆದಿದ್ದಾರೆ.

ಪ್ರಧಾನಿ ಕೂಡ ಪತ್ನಿ ಹೆಸರು ನಮೂದಿಸಿಲ್ಲ
ಅಹಮದಾಬಾದ್:
ನರೇಂದ್ರ ಮೋದಿ ಅವರ ವೈವಾಹಿಕ ವಿಚಾರವನ್ನೆತ್ತಿ ಟೀಕಿಸುತ್ತಿರುವ ಕಾಂಗ್ರೆಸ್‌ಗೆ ಬಿಜೆಪಿ ತಿರುಗೇಟು ನೀಡಿದೆ. ಪ್ರಧಾನಿ ಮನಮೋಹನ್ ಸಿಂಗ್ ಅವರೂ ರಾಜ್ಯಸಭೆಗೆ ಸ್ಪರ್ಧಿಸುವಾಗ ಅಫಿಡವಿಟ್‌ನಲ್ಲಿ ತಮ್ಮ ಪತ್ನಿಯ ಹೆಸರು ನಮೂದಿಸಿಲ್ಲ ಎಂದು ಬಿಜೆಪಿ ಹೇಳಿದೆ. ಪ್ರಧಾನಿ ಸಿಂಗ್ ಅವರ ಅಫಿಡವಿಟ್ ಪ್ರತಿಯನ್ನು ಅಹಮದಾಬಾದ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರದರ್ಶಿಸಿದ ಬಿಜೆಪಿ ವಕ್ತಾರ ರವಿಶಂಕರ್ ಪ್ರಸಾದ್, ಸಿಂಗ್ ಅವರೂ ತಮ್ಮ ಪತ್ನಿಯ ಹೆಸರು ಪ್ರಕಟಿಸಿಲ್ಲ. ಹಾಗಾಗಿ ಅಂತಹ ವಿಚಾರಗಳ ಬಗ್ಗೆ ಏಕೆ ಮಾತಾಡಬೇಕು ಎಂದು ಪ್ರಶ್ನಿಸಿದ್ದಾರೆ. ಆದರೆ ಅಫಿಡವಿಟ್ ಯಾವ ವರ್ಷದ್ದು ಎಂಬ ಪ್ರಶ್ನೆಗೆ ಉತ್ತರಿಸಲು ಪ್ರಸಾದ್ ನಿರಾಕರಿಸಿದ್ದಾರೆ. ಗುಜರಾತ್ ಬಿಜೆಪಿ ನಾಯಕರು ಮಾತ್ರ ಅದು 2013ರಲ್ಲಿ ಪ್ರಧಾನಿ ಸಲ್ಲಿಸಿದ ಅಫಿಡವಿಟ್‌ನದ್ದು ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.