ಶರ್ಮಿಳಾಗೆ ಸಿಗದ ಅವಕಾಶ!
ಇಂಪಾಲ್: ಮಾನವ ಹಕ್ಕುಗಳ ಹೋರಾಟಗಾರ ಇರೋಮ್ ಶರ್ಮಿಳಾ ಚಾನು ಅವರು ಮತದಾನದ ಹಕ್ಕಿನಿಂದ ವಂಚಿತರಾಗಿದ್ದಾರೆ. ಪ್ರಜಾಪ್ರಾತಿನಿಧ್ಯ ಕಾಯ್ದೆಯ ಪ್ರಕಾರ ಶಿಕ್ಷೆ ಅನುಭವಿಸುತ್ತಿರುವ ವ್ಯಕ್ತಿಗೆ ಮತದಾನಕ್ಕೆ ಅವಕಾಶ ಇಲ್ಲ. ಹಾಗಾಗಿ ಶರ್ಮಿಳಾಗೆ ಮತ ಚಲಾಯಿಸಲು ಅವಕಾಶ ನಿರಾಕರಿಸಲಾಗಿದೆ. ಪ್ರಜಾಪ್ರಭುತ್ವದ ಮೇಲಿನ ನಂಬಿಕೆ ಕಳೆದುಕೊಂಡಿದ್ದ ಹಿನ್ನೆಲೆಯಲ್ಲಿ ತಾವು ಈವರೆಗೆ ಮತ ಚಲಾಯಿಸಿಯೇ ಇರಲಿಲ್ಲ. ಆದರೆ, ಆಮ್ ಆದ್ಮಿ ಪಕ್ಷ ನನ್ನ ಅಭಿಪ್ರಾಯವನ್ನು ಬದಲಾಯಿಸಿತು ಎಂದು ಈ ಹಿಂದೆ ಶರ್ಮಿಳಾ ಹೇಳಿದ್ದರು. ಮಣಿಪುರದಲ್ಲಿ ಜಾರಿಯಲ್ಲಿರುವ ಭಯೋತ್ಪಾದನೆ ವಿರೋಧಿ ಕಾಯ್ದೆ ರದ್ದತಿಗೆ ಆಗ್ರಹಿಸಿ ಆಮರಣಾಂತ ನಿರಶನ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಶರ್ಮಿಳಾ ಅವರನ್ನು ಗೃಹ ಬಂಧನದಲ್ಲಿಡಲಾಗಿದೆ.
'ಮೋದಿ ವಿನಾಶ ಪುರುಷ'
ನವದೆಹಲಿ: ಬಿಜೆಪಿ ನಾಯಕಿ ಉಮಾಭಾರತಿಯವರು ಮೋದಿಯನ್ನು ಟೀಕಿಸುತ್ತಿರುವ 3 ವರ್ಷಗಳ ಹಿಂದಿನ ವಿಡಿಯೋ ಕ್ಲಿಪ್ ಅನ್ನು ಗುರುವಾರ ಕಾಂಗ್ರೆಸ್ ಬಿಡುಗಡೆ ಮಾಡಿದೆ. ಆಗ ಬಿಜೆಪಿ ತೊರೆದು ಭಾರತೀಯ ಜನಶಕ್ತಿ ಪಾರ್ಟಿ ಸ್ಥಾಪಿಸಿದ್ದ ಉಮಾಭಾರತಿ, ಮೋದಿ 'ವಿಕಾಸ ಪುರುಷ' ಅಲ್ಲ, 'ವಿನಾಶ ಪುರುಷ'. ಮೋದಿ ಹೇಳುತ್ತಿರುವ ಗುಜರಾತ್ನ ಜಿಡಿಪಿ ಪ್ರಗತಿ, ಬಿಪಿಎಲ್ನಿಂದ ಎಪಿಎಲ್ಗೆ ಬಡವರ ಉದ್ಧಾರ ಎಲ್ಲವೂ ನಕಲಿ. ಮಾಧ್ಯಮಗಳೇ ಮೋದಿಯನ್ನು ಬಲೂನ್ನಂತೆ ಉಬ್ಬಿಸಿದೆ ಎಂದಿದ್ದರು. ಈ ವಿಡಿಯೋವನ್ನು ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಘ್ವಿ ದೆಹಲಿಯಲ್ಲಿ ಬಿಡುಗಡೆ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ, ಇದು 3 ವರ್ಷಗಳ ಹಿಂದಿನ ಸಿಡಿ. ಉಮಾ ಈ ಹೇಳಿಕೆ ನೀಡುವಾಗ ಅವರು ಬಿಜೆಪಿಯಲ್ಲಿರಲಿಲ್ಲ. ಹಾಗಾಗಿ ಈ ಮಾತುಗಳನ್ನು ಬಳಸಿದ್ದಿರಬಹುದು. ಈಗ ಈ ಸಿಡಿ ಬಿಡುಗಡೆಗೊಳಿಸುತ್ತಿರುವುದು ಕಾಂಗ್ರೆಸ್ನ ಹತಾಶೆಯನ್ನು ಪ್ರತಿಬಿಂಬಿಸುತ್ತದೆ ಎಂದಿದೆ.
ಜಾಗೃತಿಗೆ ಆಯೋಗ ಚಾನೆಲ್
ನವದೆಹಲಿ: ಕೇಂದ್ರ ಚುನಾವಣಾ ಆಯೋಗದಿಂದಲೂ ಒಂದು ಚಾನೆಲ್ ಆರಂಭವಾಗಿದೆ! ಏನು? ಚುನಾವಣಾ ಆಯೋಗದಿಂದಲೂ ಚಾನೆಲ್ಲಾ ಎಂದು ಹುಬ್ಬೇರಿಸಬೇಡಿ. ಅದು ಆನ್ಲೈನ್ನಲ್ಲಿ ಮಾತ್ರ ಲಭ್ಯವಿದೆ. - ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಆಯೋಗ ಇಂಥ ಕ್ರಮಕ್ಕೆ ಮುಂದಾಗಿದೆ. ವಿಶೇಷವಾಗಿ ಯುವಕರನ್ನು ಆಕರ್ಷಿಸಲು ಆಯೋಗ ಈ ಸಾಹಸ ಕೈಗೊಂಡಿದೆ. ಯೂಟ್ಯೂಬ್ನಲ್ಲಿ ಅದನ್ನು ವೀಕ್ಷಿಸಬಹುದಾಗಿದೆ. ಇದೊಂದು ಮತದಾರರಿಗೆ ಶಿಕ್ಷಣ ಮತ್ತು ಜಾಗೃತಿ ವಾಹಿನಿ (ವೋಟರ್ ಎಜುಕೇಶನಲ್ ಚಾನೆಲ್) ಎಂದು ಆಯೋಗ ಹೇಳಿಕೊಂಡಿದೆ. ಮುಖ್ಯ ಚುನಾವಣಾ ಆಯುಕ್ತ ವಿ.ಎಸ್.ಸಂಪತ್ ಆರಂಭದಲ್ಲಿ ಮಾತನಾಡುತ್ತಾರೆ. ನಂತರ ಕ್ರೀಡಾಕ್ಷೇತ್ರದ ಪ್ರಮುಖ ತಾರೆಗಳಾದ ಎಂ.ಎಸ್.ದೋನಿ, ಸೈನಾ ನೆಹ್ವಾಲ್ ಮೇರಿಕೊಮ್ ಸೇರಿದಂತೆ ಪ್ರಮುಖರು ಮತದಾನದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಇದಕ್ಕೆ ಆರಂಭದಲ್ಲೇ ಉತ್ತಮ ಪ್ರತಿಕ್ರಿಯೆ ಬಂದಿದೆ. ಆಯೋಗದ ವೆಬ್ಸೈಟ್ ಢಿಢಿಢಿ.ಜ್ಛ್ಝ.ಟ್ಝ್ಛಿ.್ಝಟಿನಲ್ಲಿ ಇದು ಲಭ್ಯವಿದೆ.
ಕುಮಾರ್ಗೆ ಕೊಲೆ ಬೆದರಿಕೆ!
ಅಮೇಠಿ: 'ನನಗೆ ರಾಹುಲ್ ಗಾಂಧಿಯವರ ಆಪ್ತ ಮತ್ತು ಪ್ರಿಯಾಂಕ ವಾದ್ರಾ ಕೊಲೆ ಬೆದರಿಕೆ ಒಡ್ಡಿದ್ದಾರೆ' - ಹೀಗೆಂದು ಅಲವತ್ತುಕೊಂಡದ್ದು ಆಪ್ ನಾಯಕ. ತಮ್ಮ ವಾದವನ್ನು ಪುಷ್ಟೀಕರಿಸಲು ಅವರು ವೀಡಿಯೊ ಒಂದನ್ನು ಅಪ್ಲೋಡ್ ಮಾಡಿದ್ದಾರೆ. ಅದರ ಪ್ರಕಾರ ಸೋನಿಯಾ ಪುತ್ರಿ ಪ್ರಿಯಾಂಕಾ ವಾದ್ರಾರ ವಾಹನದ ಹಿಂದೆ ಓಡುವ ವ್ಯಕ್ತಿಯೊಬ್ಬ ಕುಮಾರ್ ವಿಶ್ವಾಸ್ಗೆ ಗುಂಡು ಹಾರಿಸಿ ಕೊಲ್ಲುವುದಾಗಿ ಬೆದರಿಕೆ ಹಾಕುತ್ತಾನೆ. ಈ ರೀತಿ ಮಾತನಾಡದಂತೆ ಪ್ರಿಯಾಂಕಾ ಆ ವ್ಯಕ್ತಿಯನ್ನು ಅಥಿತಿ ಗೃಹಕ್ಕೆ ಆಹ್ವಾನಿಸಿ ಬುದ್ಧಿಹೇಳುತ್ತಾರೆ.
ಅಂತಿಮ ಹಂತಕ್ಕೆ ಅಧಿಸೂಚನೆ
ನವದೆಹಲಿ: ಲೋಕಸಭೆಯ ಕೊನೇ ಹಂತದ ಮತದಾನಕ್ಕೆ ಗುರುವಾರ ಅಧಿಸೂಚನೆ ಹೊರಡಿಸಲಾಗಿದೆ. 3 ರಾಜ್ಯಗಳ 41 ಕ್ಷೇತ್ರಗಳಲ್ಲಿ ಮೇ 12ರಂದು ಮತದಾನ ನಡೆಯಲಿದೆ. ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಕಣಕ್ಕಿಳಿದಿರುವ ವಾರಾಣಸಿಯಲ್ಲೂ ಇದೇ ದಿನ ಮತದಾನ ನಡೆಯಲಿದೆ. ಉತ್ತರಪ್ರದೇಶದ 18, ಪಶ್ಚಿಮ ಬಂಗಾಳದ 17 ಹಾಗೂ ಬಿಹಾರದ 6 ಕ್ಷೇತ್ರಗಳಲ್ಲಿ ಮೇ 12ರಂದು ಮತದಾನ ನಡೆಯಲಿದ್ದು, ಮೋದಿ, ಕೇಜ್ರಿವಾಲ್, ಮುಲಾಯಂ ಮತ್ತಿತರರ ಹಣೆಬರಹವನ್ನು ಮತದಾರರು ಬರೆಯಲಿದ್ದಾರೆ. ಇದೇ ವೇಳೆ, ಕೇಂದ್ರ ಸಚಿವ ಬೇಣಿ ಪ್ರಸಾದ್ ವರ್ಮಾ, ಅಜಯ್ ರಾಯ್, ಬಿ.ಸಿ. ಖಂಡೂರಿ ಸೇರಿದಂತೆ ಪ್ರಮುಖರು ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ.
ಮೈಸೂರಿನಲ್ಲಿ ವಾಸ್ತವ್ಯ ಸಮರ್ಥನೆ
ಮೈಸೂರು: ಲೋಕಸಭಾ ಚುನಾವಣೆಯ ಮತದಾನದ ಮುನ್ನಾದಿನ ತಾವು ಮೈಸೂರಿನಲ್ಲಿ ವಾಸ್ತವ್ಯ ಹೂಡಿದ್ದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ನಾನು ಮೈಸೂರಿನ ಕಾಯಂ ನಿವಾಸಿ. ಅಲ್ಲಿಯೇ ಸ್ವಂತ ಮನೆ ಇದೆ. ಹೀಗಾಗಿ ಇದ್ದೆ. ಇದರಲ್ಲಿ ತಪ್ಪೇನಿದೆ ಎಂದು ಅವರು ಗುರುವಾರ ಸುದ್ದಿಗಾರರನ್ನು ಪ್ರಶ್ನಿಸಿದರು. ಆದರೂ ನಾನು ಕ್ಷೇತ್ರದ ಮತದಾರನಲ್ಲ ಎಂದು ಬಿಜೆಪಿಯವರು ಗದ್ದಲ ಎಬ್ಬಿಸಿದರು. ಹೀಗಾಗಿ ಚುನಾವಣಾ ಆಯೋಗ ಮೈಸೂರಿನಿಂದ ಹೊರಹೋಗುವಂತೆ ಸೂಚಿಸಿತು. ನೀತಿ, ನಿಯಮಗಳ ಬಗ್ಗೆ ತಪ್ಪು ವ್ಯಾಖ್ಯಾನವಾಗಿದೆ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

