

ಚಿಕನ್ ಪ್ರಿಯರಿಗೆ ಖಾರವಾದ, ಮಸಾಲೆಯುಕ್ತ ಹಾಗೂ ರುಚಿಕರವಾದ ಚಿಕನ್ ಕೊಲ್ಹಾಪುರಿ ಅತ್ಯುತ್ತಮ ಆಯ್ಕೆ. ಕೊಲ್ಹಾಪುರಿ ಶೈಲಿಯ ಮಸಾಲೆ, ಈರುಳ್ಳಿ, ಟೊಮೆಟೊ ಹಾಗೂ ವಿವಿಧ ಸಾಂಬಾರ ಪದಾರ್ಥಗಳೊಂದಿಗೆ ತಯಾರಿಸುವ ಈ ಚಿಕನ್ ಗ್ರೇವಿ ರೊಟ್ಟಿ, ಚಪಾತಿ, ನಾನ್, ಜೀರಾ ರೈಸ್ ಅಥವಾ ಅನ್ನದೊಂದಿಗೆ ಸವಿಯಲು ತುಂಬಾ ರುಚಿಯಾಗಿರುತ್ತದೆ.
ಬೇಕಾಗುವ ಪದಾರ್ಥಗಳು...
ಚಿಕನ್ – 500 ಗ್ರಾಂ
ಈರುಳ್ಳಿ – 2
ಟೊಮೆಟೊ – 2
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1½ ಚಮಚ
ಮೊಸರು – 2 ಚಮಚ
ಎಣ್ಣೆ – 3 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಅರಿಶಿನ – ½ ಚಮಚ
ಕೊತ್ತಂಬರಿ ಸೊಪ್ಪು – ಸ್ವಲ್ಪ
ಕೊಲ್ಹಾಪುರಿ ಮಸಾಲೆಗೆ ಬೇಕಾಗುವ ಪದಾರ್ಥಗಳು...
ಒಣ ಮೆಣಸಿನಕಾಯಿ – 5-6
ದನಿಯಾ – 2 ಚಮಚ
ಜೀರಿಗೆ – 1 ಚಮಚ
ಸೋಂಪು – ½ ಚಮಚ
ಕಾಳುಮೆಣಸು – ½ ಚಮಚ
ಲವಂಗ – 3-4
ಚಕ್ಕೆ – ಸಣ್ಣ ತುಂಡು
ಏಲಕ್ಕಿ – 2
ಎಳ್ಳು – 1 ಚಮಚ
ಒಣ ಕೊಬ್ಬರಿ – 2 ಚಮಚ
ಮಾಡುವ ವಿಧಾನ...
ಮೊದಲು ಚಿಕನ್‌ಗೆ ಮೊಸರು, ಸ್ವಲ್ಪ ಉಪ್ಪು, ಅರಿಶಿನ ಹಾಗೂ ½ ಚಮಚ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ 20-30 ನಿಮಿಷ ಮ್ಯಾರಿನೇಟ್ ಮಾಡಿ.
ಬಾಣಲೆಯಲ್ಲಿ ಒಣ ಮೆಣಸಿನಕಾಯಿ, ದನಿಯಾ, ಜೀರಿಗೆ, ಸೋಂಪು, ಕಾಳುಮೆಣಸು, ಲವಂಗ, ಚಕ್ಕೆ, ಏಲಕ್ಕಿ, ಎಳ್ಳು ಮತ್ತು ಒಣ ಕೊಬ್ಬರಿಯನ್ನು ಕಡಿಮೆ ಉರಿಯಲ್ಲಿ ಹುರಿಯಿರಿ.
ಮಸಾಲೆ ತಣ್ಣಗಾದ ನಂತರ ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಸಣ್ಣಗೆ ಹೆಚ್ಚಿದ ಈರುಳ್ಳಿಯನ್ನು ಹಾಕಿ ಹೊಂಬಣ್ಣ ಬರುವವರೆಗೆ ಹುರಿಯಿರಿ.
ಉಳಿದ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ, ಹಸಿ ವಾಸನೆ ಹೋಗುವವರೆಗೆ ಹುರಿಯಿರಿ.
ನಂತರ ಹೆಚ್ಚಿದ ಟೊಮೆಟೊ ಹಾಕಿ ಮೆತ್ತಗಾಗುವವರೆಗೆ ಬೇಯಿಸಿ.
ರುಬ್ಬಿಕೊಂಡಿರುವ ಕೊಲ್ಹಾಪುರಿ ಮಸಾಲೆ ಹಾಕಿ, ಎಣ್ಣೆ ಬೇರ್ಪಡುವವರೆಗೆ ಚೆನ್ನಾಗಿ ಹುರಿಯಿರಿ.
ಈಗ ಮ್ಯಾರಿನೇಟ್ ಮಾಡಿದ ಚಿಕನ್ ಸೇರಿಸಿ 5-7 ನಿಮಿಷ ಮಧ್ಯಮ ಉರಿಯಲ್ಲಿ ಹುರಿಯಿರಿ.
ಅಗತ್ಯವಿರುವಷ್ಟು ನೀರು ಹಾಗೂ ಉಪ್ಪು ಹಾಕಿ ಮುಚ್ಚಳ ಮುಚ್ಚಿ 15-20 ನಿಮಿಷ ಚಿಕನ್ ಚೆನ್ನಾಗಿ ಬೇಯುವವರೆಗೆ ಬೇಯಿಸಿ.
ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಮಿಶ್ರಣ ಮಾಡಿ. ರುಚಿಯಾದ ಚಿಕನ್ ಕೊಲ್ಹಾಪುರಿ ಸವಿಯಲು ಸಿದ್ಧ.
ಟಿಪ್ಸ್...
ಹೆಚ್ಚು ಖಾರ ಬೇಕಿದ್ದರೆ ಒಣ ಮೆಣಸಿನಕಾಯಿ ಪ್ರಮಾಣವನ್ನು ಹೆಚ್ಚಿಸಬಹುದು.
ಚಿಕನ್ ಕೊಲ್ಹಾಪುರಿಯನ್ನು ಚಪಾತಿ, ನಾನ್, ರೊಟ್ಟಿ ಅಥವಾ ಅನ್ನದೊಂದಿಗೆ ಬಿಸಿಬಿಸಿಯಾಗಿ ಬಡಿಸಿ.