

ನವದೆಹಲಿ: ಕೊರೋನಾ ವೈರಸ್ ಕುರಿತು ಅನಗತ್ಯ ಭಯ ಬೇಡ.. ಅಗತ್ಯ ಮುಂಜಾಗ್ರತೆ ವಹಿಸಿ ಎಂದು ಸಲಹೆ ನೀಡಿರುವ ಪ್ರಧಾನಿ ಮೋದಿ ಕೇಂದ್ರ ಸಚಿವರ ವಿದೇಶ ಪ್ರವಾಸಕ್ಕೆ ನಿರ್ಬಂಧ ಹೇರಿದ್ದಾರೆ.
ಹೌದು.. ಭಾರತವೂ ಸೇರಿದಂತೆ ವಿಶ್ವದ 30ಕ್ಕೂ ಅಧಿಕ ರಾಷ್ಟ್ರಗಳನ್ನು ಭಾದಿಸುತ್ತಿರುವ ಕೊರೋನಾ ವೈರಸ್ ಗೆ ಭಾರತದಲ್ಲಿ ಸೋಂಕಿತರ ಸಂಖ್ಯೆ 73ಕ್ಕೆ ಏರಿಕೆಯಾದ ಬೆನ್ನಲ್ಲೇ ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ ಕೊರೋನಾ ವೈರಸ್ ಕುರಿತು ಅನಗತ್ಯ ಭಯ ಬೇಡ.. ಮುಂಜಾಗ್ರತೆ ವಹಿಸಿ ಸೋಂಕಿನಿಂದ ದೂರ ಉಳಿಯಿರಿ ಎಂದು ಸಲಹೆ ನೀಡಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, 'ವದಂತಿಗಳನ್ನು ನಂಬಬೇಡಿ. ಕೊರೊನಾ ವಿರುದ್ಧ ಹೋರಾಡಲು ನಮ್ಮ ಸರ್ಕಾರ ಸಂಪೂರ್ಣ ಸನ್ನದ್ಧವಾಗಿದೆ ಎಂದು ಹೇಳಿದ್ದಾರೆ. ಅಂತೆಯೇ ಮುಂಜಾಗ್ರತಾ ಕ್ರಮವಾಗಿ ಕೇಂದ್ರ ಸರ್ಕಾರದ ಎಲ್ಲಾ ಸಚಿವರುಗಳ ಹಾಗೂ ಅಧಿಕಾರಿಗಳ ವಿದೇಶ ಪ್ರವಾಸವನ್ನು ರದ್ದುಗೊಳಿಸಲಾಗಿದೆ ಎಂದು ಹೇಳಿದ್ದಾರೆ.
ಅಲ್ಲದೇ ವಿದೇಶ ಪ್ರವಾಸವನ್ನು ರದ್ದುಗೊಳಿಸುವಂತೆ ಜನರಲ್ಲೂ ಮನವಿ ಮಾಡಿರುವ ಪ್ರಧಾನಿ ಮೋದಿ, ಕೊರೋನಾದಿಂದ ಕಟುಂಬವನ್ನು ರಕ್ಷಿಸಿಕೊಳ್ಳುವ ಹೊಣೆ ಎಲ್ಲರ ಮೇಲಿದೆ ಎಂದು ಹೇಳಿದ್ದಾರೆ.