

ನಗರಗಳಲ್ಲಿ ಟ್ರಾಫಿಕ್ ಜಾಮ್ ಮಧ್ಯೆ ರೆಡ್ ಸಿಗ್ನಲ್ ತಪ್ಪಿಸಲು ದ್ವಿಚಕ್ರ ವಾಹನ ಸವಾರರು ಫುಟ್ ಪಾತ್ ಮೇಲೆ ಗಾಡಿ ಹತ್ತಿಸಿ ನಸುಳಿಕೊಂಡು ಹೋಗುವುದುಂಟು. ಫುಟ್ ಪಾತ್ ಇರುವುದು ನಗರದ ದಟ್ಟಣೆ ಮಧ್ಯೆ ಜನರು ಸುಗಮವಾಗಿ ನಡೆದುಕೊಂಡು ಹೋಗಲು.
ಆದರೆ ಫುಟ್ ಪಾತ್ ನಲ್ಲಿ ಕೂಡ ವಾಹನ ಸವಾರರು ಗಾಡಿ ಹತ್ತಿಸಿದಾಗ ನಡೆದುಕೊಂಡು ಹೋಗುವವರಿಗೆ ತೊಂದರೆ ಆಗುತ್ತದೆ. ಅನೇಕರು ಶಪಿಸಿಕೊಂಡು ಮುಂದೆ ಹೋಗುತ್ತಾರೆ.
ಆದರೆ ಕೇರಳದ ಕೋಝಿಕ್ಕೋಡ್ ನ ಎರಂಜಿಪ್ಪಾಳಂ ಜಂಕ್ಷನ್‌ನಲ್ಲಿ, ಸುಮಾರು 60 ವರ್ಷದ ಮಹಿಳೆ ಫುಟ್‌ಪಾತ್ ಮೂಲಕ ಹೋಗಿ ರೆಡ್ ಸಿಗ್ನಲ್ ತಪ್ಪಿಸಲು ಪ್ರಯತ್ನಿಸಿದ್ದ ಸ್ಕೂಟರ್ ಸವಾರನನ್ನು ತಡೆದು, ಮತ್ತೆ ರಸ್ತೆಗೆ ಇಳಿಯುವಂತೆ ಮಾಡಿದ್ದಾರೆ. ಇದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದ್ದು, ಮಹಿಳೆಯ ಧೈರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸ್ಕೂಟರ್ ಸವಾರ ಪಕ್ಕದಿಂದ ಹೋಗಲು ಯತ್ನಿಸಿದಾಗ, ಮಹಿಳೆ ತನ್ನ ಕಾಲುಗಳನ್ನು ಮುಂದಿಟ್ಟು ದಾರಿ ತಡೆದರು. ನಂತರ ಅವರು ತನ್ನ ಮೊಬೈಲ್ ಫೋನ್ ತೆಗೆದು ವಾಹನದ ನೋಂದಣಿ ಸಂಖ್ಯೆಯ ಫೋಟೋ ತೆಗೆದು, ನಿಯಮ ಉಲ್ಲಂಘನೆಯನ್ನು ಅಧಿಕಾರಿಗಳಿಗೆ ತಿಳಿಸುವ ಉದ್ದೇಶವಿರುವಂತೆ ತೋರಿಸಿದರು.
ಕೊನೆಗೆ ಸವಾರನು ಹಿಂತಿರುಗಿ ಮುಖ್ಯ ರಸ್ತೆಗೆ ಹೋಗಿ, ಇತರ ವಾಹನಗಳ ಸಾಲಿನಲ್ಲಿ ಸೇರಬೇಕಾಯಿತು. ಈ ಘಟನೆ ನಿನ್ನೆ, ನಂತರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಾಗರಿಕ ಜವಾಬ್ದಾರಿಯ ಪ್ರತೀಕವಾಗಿ, ಕೇರಳದ ಸಾಕ್ಷರತೆಗೂ ಸಂಬಂಧಿಸಿ ಈ ಘಟನೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಬಿಳಿ ಸೀರೆ ಧರಿಸಿದ ಆ ಮಹಿಳೆಯ ಗುರುತು ಇನ್ನೂ ತಿಳಿದುಬಂದಿಲ್ಲ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಅವರನ್ನು ನಾಗರಿಕ ಜಾಗೃತಿ ಮತ್ತು ಧೈರ್ಯದ ಪ್ರತೀಕವಾಗಿ ವ್ಯಾಪಕವಾಗಿ ಪ್ರಶಂಸಿಸಲಾಗಿದೆ. ಘಟನೆಯ ನಂತರ ಕ್ಯಾಮೆರಾವನ್ನು ಗಮನಿಸಿದ ಅವರು ಥಮ್ಸ್-ಅಪ್ ಸೂಚನೆ ನೀಡಿದ ದೃಶ್ಯವು ವಿಶೇಷವಾಗಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಮೋಟಾರ್ ವಾಹನ ಇಲಾಖೆ ಆ ಮಹಿಳೆಯನ್ನು ಗುರುತಿಸಿ ಸನ್ಮಾನಿಸಲು ಪ್ರಯತ್ನಿಸುತ್ತಿದೆ. ಇಲಾಖೆ ಈ ವೈರಲ್ ವಿಡಿಯೋವನ್ನು ಹಂಚಿಕೊಂಡು, ಆ ಮಹಿಳೆಯನ್ನು ಗುರುತಿಸಲು ಸಾರ್ವಜನಿಕರಿಂದ ಸಹಾಯ ಕೋರಿದೆ.
Advertisement