

ಮದುವೆಯಾಗುವ ಗಂಡು ತಾನು ಮದುವೆಯಾಗುವ ಹೆಣ್ಣು ಹಾಗಿರಬೇಕು, ಹೀಗಿರಬೇಕು ಎಂದು ಲೆಕ್ಕ ಹಾಕುವ ಬದಲು ಮದುವೆಯಾಗೋಕೆ ಒಂದು ಹೆಣ್ಣು ಸಿಕ್ಕರೆ ಸಾಕಪ್ಪಾ..ಎಂದು ಕೇಳುವ ಕಾಲ ಬರಲಿದೆ. ಇನ್ನೊಂದಷ್ಟು ವರ್ಷ ಕಳೆದರೆ ಬಾಳ ಸಂಗಾತಿಯನ್ನು ಆಯ್ಕೆ ಮಾಡಲು ಅಲೆದಾಡುವ ಪರಿಸ್ಥಿತಿ ಭಾರತ ಮತ್ತು ಚೀನಾದ ಯುವಕರಿಗೆ ಬರಲಿದೆ.
ಮಹಿಳೆ ಮತ್ತು ಪುರುಷರ ನಡುವಿನ ಲಿಂಗಾನುಪಾತದಲ್ಲಿ ಏರುಪೇರಾಗಿರುವುದೇ ಈ ಸ್ಥಿತಿಗೆ ಕಾರಣ. ಈಗಿರುವ ಪರಿಸ್ಥಿತಿ ಮುಂದುವರಿದಲ್ಲಿ ಮುಂದಿನ 50 ವರ್ಷಗಳಲ್ಲಿ ಭಾರತದಲ್ಲಿ ಮಹಿಳೆಯರ ಸಂಖ್ಯೆ 100 ಇದ್ದರೆ, ಪುರುಷರ ಸಂಖ್ಯೆ 191 ಎನ್ನುವ ರೀತಿಯಲ್ಲಿರುತ್ತದೆ.
ಜನಸಂಖ್ಯಾ ವರ್ಧನೆಯ ಕುರಿತು ಅಧ್ಯಯನ ನಡೆಸುವ ಫ್ರಾನ್ಸ್‌ನ ಇನ್ಸಿಟ್ಯೂಟ್ ಆಫ್ ಡೆವಲೆಪ್‌ಮೆಂಟ್ ರಿಸರ್ಚ್ ತಮ್ಮ ಅಧ್ಯಯನ ವರದಿಯಲ್ಲಿ ಹೇಳಿದ್ದೇನು ಗೊತ್ತಾ? 2050ರ ವೇಳೆಗೆ 200 ಪುರುಷರಲ್ಲಿ 91 ಪುರುಷರಿಗೆ ಸಂಗಾತಿ ಸಿಗಲ್ಲ. ಸ್ತ್ರೀ ಅನುಪಾತ ಮುಂದಿನ ವರ್ಷಗಳಲ್ಲಿ ಸರಿಹೋದರೂ 2070ರ ವೇಳೆ ನಮ್ಮ ಜನಸಂಖ್ಯೆಯಲ್ಲಿನ 15 ಶೇ. ಯುವಕರು ಅವಿವಾಹಿತರಾಗಿಯೇ ಉಳಿಯುತ್ತಾರಂತೆ!
ಭಾರತ ಮತ್ತು ಚೀನಾದಲ್ಲಿ ಲಿಂಗಾನುಪಾತದಲ್ಲಿ ಭಾರೀ ಏರುಪೇರುಗಳುಂಟಾಗಿದೆ. ಚೀನಾದಲ್ಲಿ 2010-15ರ ಅವಧಿಯಲ್ಲಿ ಹುಟ್ಟಿದ ಮಕ್ಕಳ ಗಣತಿ ಮಾಡಿದರೆ 100 ಹೆಣ್ಣು ಮಕ್ಕಳಿಗೆ 116 ಗಂಡು ಮಕ್ಕಳ ಸಂಖ್ಯೆ ಇರುತ್ತದೆ. ಅದೇ ವೇಳೆ ಭಾರತದಲ್ಲಿ 100 ಹೆಣ್ಣು ಮಕ್ಕಳಿದ್ದರೆ ಗಂಡು ಮಕ್ಕಳ ಸಂಖ್ಯೆ 111 ಇರುತ್ತದೆಯಂತೆ. ಈ ರೀತಿ ಮುಂದುವರಿದರೆ 2050-54ರ ಹೊತ್ತಲ್ಲಿ ಭಾರತದಲ್ಲಿ 100 ಹೆಣ್ಮಕ್ಕಳು ವಿವಾಹಿತರಾಗುವಾಗ 64 ಗಂಡು ಮಕ್ಕಳು ಅವಿವಾಹಿತರಾಗಿ ಉಳಿದುಬಿಡುತ್ತಾರೆ.
ಭಾರತದಲ್ಲಿ ಮತ್ತು ಚೀನಾದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆಯಾಗಲು ಜನಸಂಖ್ಯೆ ನಿಯಂತ್ರಣವೇ ಪ್ರಧಾನ ಕಾರಣ. 90ರ ದಶಕದಲ್ಲಿ ಚೀನಾದಲ್ಲಿ ದಂಪತಿಗಳು ಒಂದು ಮಗು ಸಾಕು ಎಂಬ ನೀತಿಯಿಂದಾಗಿ ಹೆಚ್ಚಿನವರು ಗಂಡು ಮಕ್ಕಳನ್ನೇ ಬಯಸಿದರು. ಗರ್ಭಸ್ಥ ಶಿಶುವಿನ ಲಿಂಗ ನಿರ್ಣಯ ಮಾಡುವುದು ವ್ಯಾಪಕವಾದಾಗ ಹೆಣ್ಣು ಹೆರುವವರ ಸಂಖ್ಯೆಯೂ ಕಡಿಮೆಯಾಯಿತು.
ವರದಕ್ಷಿಣೆ ಕೇಳುವವರ ಸಂಖ್ಯೆ ಕಡಿಮೆಯಾಗಲಿದೆ!
ಹೆಣ್ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದ್ದಂತೆ ವರದಕ್ಷಿಣೆ ಅಪೇಕ್ಷಿಸುವವರ ಸಂಖ್ಯೆಯೂ ಕಡಿಮೆಯಾಗಲಿದೆ. ಮದುವೆಯಾಗಲು ಹೆಣ್ಣು ಸಿಗದೇ ಹೋದಾಗ, ಹೆಚ್ಚು ವರದಕ್ಷಿಣೆ ಬೇಡುವವರನ್ನು ಹೆಣ್ಮಕ್ಕಳು ದೂರ ತಳ್ಳುತ್ತಾರೆ. ಹೆಣ್ಣಿಗೆ ಡಿಮ್ಯಾಂಡ್ ಹೆಚ್ಚಿರುವಾಗ ಯಾವುದೇ ರೀತಿಯ ಸಂಧಾನಕ್ಕೂ ಗಂಡು ರೆಡಿಯಾಗುತ್ತಾನೆ ಎಂಬುದನ್ನು ಅಧ್ಯಯನ ವರದಿಗಳು ಹೇಳಿವೆ.
ಆದಾಗ್ಯೂ, ಸ್ತ್ರೀ ಪುರುಷ ಅನುಪಾತದಲ್ಲಿ ಏರು ಪೇರಾಗುವುದರಿಂದ ಹೆಣ್ಮಕ್ಕಳಿಗೆ ತೊಂದರೆಯೂ ಇದೆ. ಹೆಣ್ಣು ಸಿಗದೇ ಹೋದಾಗ ಮಹಿಳೆಯರ ಮೇಲೆ ಆಕ್ರಮಣವೂ ಜಾಸ್ತಿಯಾಗುತ್ತದೆ. ಮಹಿಳೆಯನ್ನು ಅಪಹರಣ ಮಾಡಿ, ಅವರನ್ನು ಮಾರುವ ದಂಧೆಯೂ ಹೆಚ್ಚಾಗಲಿದ್ದು, ವೇಶ್ಯಾವೃತ್ತಿ ಜಾಸ್ತಿಯಾಗಲಿದೆ ಎಂಬ ಆತಂಕದ ವಿಷಯವನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.
-ಅಂಜಲಿ