ಕ್ರಿಕೆಟ್

ಧೋನಿ ಟೀಂ ಇಂಡಿಯಾದ ಅತ್ಯಂತ ಯಶಸ್ವೀ ನಾಯಕ ಎಂದು ಸಾಬೀತುಪಡಿಸುವ ಆ ಐದು ನಿರ್ಧಾರಗಳು!

ಧೋನಿ ಟೀಂ ಇಂಡಿಯಾದ ಅತ್ಯಂತ ಯಶಸ್ವೀ ನಾಯಕ ಎಂದು ಸಾಬೀತುಪಡಿಸುವ ಆ ಐದು ನಿರ್ಧಾರಗಳು!
ಸಂಗ್ರಹ ಚಿತ್ರ
Published On :

ನವದೆಹಲಿ: ಟೀಂ ಇಂಡಿಯಾ ನಾಯಕರಾಗಿ ಎಂಎಸ್ ಧೋನಿ ಹಲವು ಏಳುಬೀಳುಗಳನ್ನು ಕಂಡಿದ್ದಾರೆ. ಆದರೆ ಧೋನಿ ಇದುವರೆಗೂ ಭಾರತ ತಂಡ ಕಂಡ ಅತ್ಯಂತ ಯಶಸ್ವೀ ನಾಯಕ ಎನ್ನುವುದರಲ್ಲಿ ಎರಡು ಮಾತಿಲ್ಲ. ಧೋನಿ  ಭಾರತ ತಂಡದ ಯಶಸ್ವೀ ನಾಯಕ ಎಂಬುದನ್ನು ಸಾಬೀತು ಪಡಿಸುವ ಅವರ ಆ ಐದು ದಿಟ್ಟ ನಿರ್ಧಾರಗಳು ಇಲ್ಲಿವೆ.

1. 2007ರ ಟಿ20 ವಿಶ್ವಕಪ್ ಫೈನಲ್-ಭಾರತ-ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಅಂತಿಮ ಓವರ್'ನ ನಿರ್ಧಾರ
2007ರ ಟಿ20 ವಿಶ್ವಕಪ್'ನ ಫೈನಲ್ ಪಂದ್ಯದಲ್ಲಿ ಬದ್ಧಶತ್ರುಗಳಾದ ಪಾಕಿಸ್ತಾನ ತಂಡದ ವಿರುದ್ಧ ಅಂತಿಮ ಓವರ್ ಎಸೆಯಲು ಧೋನಿ ಜೋಗಿಂದರ್ ಶರ್ಮಾ ಅವರ ಕೈಗೆ ಬಾಲ್ ನೀಡಿದ್ದರು. ಈ ನಿರ್ಧಾರ ನಿಜಕ್ಕೂ ಎಲ್ಲರ  ಹುಬ್ಬೇರುವಂತೆ ಮಾಡಿತ್ತು. ಶರ್ಮಾ ಎಸೆದ ಈ ಹಿಂದಿನ ಓವರ್ ನಲ್ಲಿ ಅತ್ಯಂತ ದುಬಾರಿಯಾಗಿದ್ದರು. ಪಂದ್ಯ ಗೆಲ್ಲಲು ಪಾಕಿಸ್ತಾನಕ್ಕೆ ಕೇವಲ 13 ರನ್ ಗಳ ಅವಶ್ಯಕತೆ ಇತ್ತು. ಈ ಹಂತದಲ್ಲಿ ಧೋನಿ ನಿರ್ಧಾರ ಹಲವರ ಆಕ್ರೋಶಕ್ಕೆ  ಕಾರಣವಾಗಿತ್ತಾದರೂ, ಆ ಆಕ್ರೋಶ ಹೆಚ್ಚು ಸಮಯ ಇರಲಿಲ್ಲ. ಕಾರಣ ಆ ಓವರ್ ನಲ್ಲಿ ಜೋಗಿಂದರ್ ಶರ್ಮಾ ನಿಜಕ್ಕೂ ಮ್ಯಾಜಿಕ್ ಮಾಡಿ ಪಾಕಿಸ್ತಾನದ ಅಪಾಯಕಾರಿ ಬ್ಯಾಟ್ಸಮನ್ ಮಿಸ್ಬಾ ಉಲ್ ಹಕ್ ರನ್ನು ಔಟ್ ಮಾಡಿ ಭಾರತ  ತಂಡವನ್ನು ಗೆಲ್ಲಿಸಿಕೊಟ್ಟಿದ್ದರು. ಆ ಮೂಲಕ 2 ದಶಕಗಳ ಬಳಿಕ ಟೀಂ ಇಂಡಿಯಾ ಮೊದಲ ಬಾರಿಗೆ ವಿಶ್ವಕಪ್ ಎತ್ತಿ ಹಿಡಿದಿತ್ತು. ಈ ಪಂದ್ಯದಲ್ಲಿ ವಿಲ್ಲನ್ ಆಗಿದ್ದ ಜೋಗಿಂದರ್ ಶರ್ಮಾ ಪಂದ್ಯ ಮುಕ್ತಾಯದ ಬಳಿಕ ನಿಜಕ್ಕೂ ಹೀರೋ  ಆಗಿ ಮಿಂಚಿದ್ದರು. ಕ್ರಿಕೆಟ್ ಇತಿಹಾಸದ ಮರೆಯದ ಪುಟಗಳಲ್ಲಿ ಈ ಪಂದ್ಯ ಅವಿಸ್ಮರಣೀಯವಾಗಿದೆ.

2. 2011ರ ವಿಶ್ವಕಪ್ ಫೈನಲ್; ಶ್ರೀಲಂಕಾ ವಿರುದ್ಧ ಯುವಿಗಿಂತ ಮೊದಲೇ ಬ್ಯಾಟಿಂಗ್ ಇಳಿದ ಧೋನಿ
ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ 2011ರ ವಿಶ್ವಕಪ್ ಪಂದ್ಯವನ್ನು ಮರೆಯಲು ಸಾಧ್ಯವೇ ಇಲ್ಲ. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಪಾಲಿಗೂ ಈ ಸರಣಿ ಅವಿಸ್ಮರಣೀಯವಾಗಿತ್ತು. ಸಚಿನ್ ಪಾಲಿಗೆ ಕಟ್ಟಕಡೆಯ ವಿಶ್ವಕಪ್  ಸರಣಿಯಾಗಿದ್ದರಿಂದ ಭಾರತ ತಂಡಕ್ಕೆ ಈ ಸರಣಿ ಗೆಲ್ಲಲೇಬೇಕಾದ ಅನಿವಾರ್ಯತೆ ಇತ್ತು. ಸರಣಿಯಲ್ಲಿ ಉತ್ತಮ ಪ್ರದರ್ಶನದ ಮೂಲಕ ಧೋನಿ ಪಡೆ ಫೈನಲ್ ಗೂ ಪ್ರವೇಶ ಪಡೆದಿತ್ತು. ಫೈನಲ್ ನಲ್ಲಿ ಭಾರತಕ್ಕೆ ಬಲಿಷ್ಠ ಶ್ರೀಲಂಕಾ  ತಂಡ ಎದುರಾಗಿತ್ತು. ಲಂಕಾ ನೀಡಿದ್ದ 275 ರನ್ ಗಳ ಗುರಿಯನ್ನು ಭಾರತ ಮುಟ್ಟಬೇಕಿತ್ತು. ಆದರೆ ತಂಡದ ಮೊತ್ತ 114ರನ್ ಗಳಾಗಿರುವಾಗಲೇ ಪ್ರಮುಖ ನಾಲ್ಕು ವಿಕೆಟ್ ಗಳನ್ನು ಕಳೆದುಕೊಳ್ಳಲಾಗಿತ್ತು. ಈ ಹಂತದಲ್ಲಿ ಭಾರತ  ತಂಡಕ್ಕೆ ಕ್ರೀಸ್ ನಲ್ಲಿ ಗಟ್ಟಿಯಾಗಿ ನಿಂತು ಇನ್ನಿಂಗ್ಸ್ ಕಟ್ಟುವ ಆಟಗಾರನ ಅವಶ್ಯಕತೆ ಇತ್ತು. ಮುಂದಿನ ಬ್ಯಾಟ್ಸಮನ್ ಆಗಿ ಯುವರಾಜ್ ಸಿಂದ್ ಕಣಕ್ಕಿಳಿಯಬೇಕಿತ್ತು. ಆದರೆ ಧೋನಿ ತಮಗೆ ತಾವೇ ಭಡ್ತಿ ನೀಡಿ ಯುವಿ ಬದಲಿಗೆ ಪ್ಯಾಡ್  ಕಟ್ಟಿ ಅಂಗಳಕ್ಕೆ ಇಳಿದರು. ಬಳಿಕ ನಡೆದದ್ದೆಲ್ಲಾ ಇತಿಹಾಸ. ಅಂದು ಧೋನಿ ಮತ್ತು ಯುವಿ ಅಜೇಯ ಆಟವನ್ನಾಡುವ ಮೂಲಕ ಸತತ 29 ವರ್ಷಗಳ ಬಳಿಕ ಭಾರತ ವಿಶ್ವಕಪ್ ಎತ್ತಿ ಹಿಡಿಯುವಂತೆ ಮಾಡಿದ್ದರು.

3. 2013 ಚಾಂಪಿಯನ್ಸ್ ಟ್ರೋಫಿ ಫೈನಲ್; ಇಂಗ್ಲೆಂಡ್ ವಿರುದ್ಧ ಅಂತಿಮ ಓವರ್ ನಲ್ಲಿ ಇಶಾಂತ್ ಶರ್ಮಾಗೆ ಬಾಲ್ ನೀಡಿದ್ದ ಧೋನಿ

2007ರ ವಿಶ್ವಕಪ್ ಫೈನಲ್ ಅನ್ನು ನೆನಪಿಸುವ ಮತ್ತೊಂದು ಪಂದ್ಯಕ್ಕೆ ಧೋನಿ 2013ರಲ್ಲಿ ವೇದಿಕೆ ಕಲ್ಪಿಸಿಕೊಟ್ಟಿದ್ದರು. ಫೈನಲ್ ನಲ್ಲಿ ಗೆಲ್ಲಲು ಇಂಗ್ಲೆಂಡ್ ತಂಡಕ್ಕೆ 18 ಎಸೆತಗಳಲ್ಲಿ ಕೇವಲ 28 ರನ್ ಗಳ ಅವಶ್ಯಕತೆ ಇತ್ತು. ಆಗ  ಇಂಗ್ಲೆಂಡ್ ತಂಡ ಕೇವಲ ನಾಲ್ಕು ವಿಕೆಟ್ ಗಳನ್ನು ಮಾತ್ರ ಕಳೆದುಕೊಂಡಿತ್ತು. ಈ ಪಂದ್ಯದಲ್ಲಿ ಇಶಾಂತ್ ಶರ್ಮಾ ತಮ್ಮ ದುಬಾರಿ ಸ್ಪೆಲ್'ನಿಂದಾಗಿ ಕ್ರೀಡಾ ಪ್ರೇಮಿಗಳ ಆಕ್ರೋಶಕ್ಕೆ ಗುರಿಯಾಗಿದ್ದರು. ಪಂದ್ಯದ ಅಂತಿಮ ಹಂತದಲ್ಲಿ  ಇಶಾಂತ್ 19 ಅಥವಾ 20ನೇ ಓವರ್ ಮಾಡಬಹುದು ಎಂದು ಎಣಿಸಲಾಗಿತ್ತು. ಆದರೆ ಇಲ್ಲಿ ಮತ್ತೆ ತಮ್ಮ ಗ್ಯಾಂಬ್ಲಿಂಗ್ ಮುಂದವರೆಸಿದ ಧೋನಿ 18ನೇ ಓವರ್ ಅನ್ನೇ ಇಶಾಂತ್ ಕೈಗಿತ್ತರು. ಈ ವೇಳೆ ಪಂದ್ಯ ಬಹುತೇಕ ಭಾರತ  ತಂಡದಿಂದ ಕೈಜಾರಿತ್ತು ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಇಶಾಂತ್ ಎಸೆದ ಪ್ರಬಲ ಎಸೆತಗಳು ಆಂಗ್ಲರ ವಿಕೆಟ್ ಗಳನ್ನು ಉರುಳಿಸಿದ್ದವು. ಅಂತಿಮವಾಗಿ ಭಾರತ ಇಂಗ್ಲೆಂಡ್ ವಿರುದ್ಧ 5 ರನ್ ಗಳ ರೋಚಕ ಜಯ ಸಾಧಿಸಿತ್ತು.

4. 2013ರ ತ್ರಿಕೋನ ಏಕದಿನ ಸರಣಿ; ಲಂಕಾ ವಿರುದ್ಧದ ಪಂದ್ಯದ ಅಂತಿಮ ಹಂತದಲ್ಲಿ ಏಕಾಂಗಿ ಹೋರಾಟ ನಡೆಸಿದ್ದ ಧೋನಿ

2013ರಲ್ಲಿ ವೆಸ್ಟ್ ಇಂಡೀಸ್ ಹಾಗೂ ಶ್ರೀಲಂಕಾ ತಂಡಗಳ ವಿರುದ್ಧ ನಡೆದ ತ್ರಿಕೋನ ಏಕದಿನ ಸರಣಿಯ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡ ಭಾರತವನ್ನು ಎದುರಿಸಿತ್ತು. ಕಡಿಮೆ ಮೊತ್ತ ದಾಖಲಿಸಿದ್ದ ಲಂಕಾ ತಂಡ ತನ್ನ ಪ್ರಬವ  ಬೌಲಿಂಗ್ ನಿಂದಾಗಿ ಭಾರತವನ್ನು ಸೋಲಿನ ದವಡೆಗೆ ನೂಕಿತ್ತು. ಅಂತಿಮ ಹಂತದಲ್ಲಿ ಭಾರತ 18 ಎಸೆತಗಳಲ್ಲಿ 19 ರನ್ ಗಳಿಸಬೇಕಿತ್ತು. ಭಾರತಕ್ಕಿರುವ ಆಸರೆ ಎಂದರೆ ಅದು ಧೋನಿ ಮಾತ್ರ. ಮತ್ತೊಂದು ತುದಿಯಲ್ಲಿ ಇಶಾಂತ್  ಶರ್ಮಾ ಇದ್ದರು. ಅತ್ತ ಲಂಕಾದ ಮಾರಕ ವೇಗಿ ಲಸಿತ್ ಮಾಲಿಂಗಾ ಅಂತಮ ಹಂತದ ಬೌಲಿಂಗ್ ಮಾಡುತ್ತಿದ್ದರು. ಈ ಹಂತದಲ್ಲಿ ಧೋನಿ ತೋರಿದ ಚಾಣಾಕ್ಷ ನಡೆಯಿಂದಾಗಿ ಭಾರತ ಆ ಪಂದ್ಯವನ್ನು ಗೆದ್ದಿತ್ತು. ಅಂದು ಮಾಲಿಂಗಾ  ಬೌಲಿಂಗ್ ನಲ್ಲಿ ಧೋನಿ ಇಶಾಂತ್ ಶರ್ಮಾ ಅವರಿಗೆ ಬ್ಯಾಟ್ ಮಾಡುವ ಅವಕಾಶವನ್ನೇ ನೀಡಿರಲಿಲ್ಲ. ಸಿಂಗಲ್ ರನ್ ಕದಿಯುವ ಅವಕಾಶವನ್ನೂ ಕೂಡ ಪಂದ್ಯ ಗೆಲ್ಲುವ ಉದ್ದೇಶದಿಂದ ಕೈ ಚೆಲ್ಲಿ ಕೇವಲ 2 ಮತ್ತು ಬೌಂಡರ್ ಗಳಿಗಾಗಿ  ಧೋನಿ ಕಾದಿದ್ದರು. ಅದರಂತೆ ಭಾರತ ತಂಡ ಆ ಪಂದ್ಯವನ್ನು ರೋಚಕವಾಗಿ ಜಯಿಸಿತ್ತು. ಧೋನಿ ಏಕಾಂಗಿ ಹೋರಾಟ ಆ ಪಂದ್ಯವನ್ನು ಗೆಲ್ಲಿಸಿಕೊಟ್ಟಿತ್ತು.

5. 2016 ಟಿ20 ವಿಶ್ವಕಪ್; ಬಾಂಗ್ಲಾ ವಿರುದ್ಧ ಗ್ಲೌಸ್ ತೆಗೆದು ವಿಕೆಟ್ ಕೀಪಿಂಗ್ ಮಾಡಿ ಅಚ್ಚರಿ ಮೂಡಿಸಿದ್ದ ಧೋನಿ
ಪಂದ್ಯ ಗೆಲ್ಲಲು ಧೋನಿ ಯಾವ ಸಾಹಸಕ್ಕೂ ಕೈ ಹಾಕಬಲ್ಲರು ಎಂಬ ಮಾತಿಗೆ 2016ರಲ್ಲಿ ನಡೆದ ಟಿ20 ವಿಶ್ವಕಪ್ ಸಾಕ್ಷಿಯಾಗಿತ್ತು. ಸೂಪರ್ 10 ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ಧೋನಿ ಗ್ಲೌಸ್ ತೆಗೆದು ವಿಕೆಟ್ ಕೀಪಿಂಗ್ ಮಾಡಿದ್ದರು.  ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಗ್ಲೌಸ್ ತೆಗೆದು ವಿಕೆಟ್ ಕೀಪಿಂಗ್ ಮಾಡುವುದು ಅಪಾಯಕಾರಿ ಎಂದು ತಿಳಿದಿದ್ದರೂ ಆ ಸಂದರ್ಭದಲ್ಲಿ ಧೋನಿ ಅನುಸರಿಸಿದ್ದ ನಡೆಯಿಂದಾಗಿ ಭಾರತ ಆ ಪಂದ್ಯವನ್ನು ಗೆದ್ದಿತ್ತು. ಆ ಪಂದ್ಯ ಸೋತಿದ್ದರೆ  ಭಾರತ ಅಂದು ಟೂರ್ನಿಯಿಂದಲೇ ಹೊರ ಬೀಳುವ ಅವಕಾಶವಿತ್ತು. ಬಾಂಗ್ಲಾಗೆ ಆ ಪಂದ್ಯಗೆಲ್ಲಲು 3 ಎಸೆತಗಳಲ್ಲಿ ಕೇವಲ 2 ರನ್ ಗಳ ಅವಶ್ಯಕತೆ ಇತ್ತು. ಈ ಹಿಂದಿನ ಎರಡು ಎಸೆತಗಳಲ್ಲಿ ಬಾಂಗ್ಲಾದೇಶದ ದಾಂಡಿಗ ಮುಶ್ಫಿಕರ್  ರಹೀಮ್ ಸತತ ಎರಡು ಬೌಂಡರಿಗಳನ್ನು ಸಿಡಿಸಿ ಗೆಲುವು ತಮ್ಮದೇ ಎಂದು ಸಂಭ್ರಮಿಸಿದ್ದರು. ಆದರೆ ಬಳಿಕದ ಎಸೆತದಲ್ಲಿಯೇ ರಹೀಮ್ ಔಟ್ ಆಗಿದ್ದರು. ಬಳಿಕ ಬಂದ ಮಹಮದುಲ್ಲಾ ಕೂಡ ಔಟ್ ಆದರು. ಬಳಿಕ ಪಾಂಡ್ಯಾ ಬಳಿ  ತೆರಳಿದ ಧೋನಿ ವಿಕೆಟ್ ನಿಂದ ಆಫ್ ಸೈಡ್ ಬಾಲ್ ಎಸೆಯುವಂತೆ ಹೇಳಿ ಹೋದರು. ಧೋನಿ ಮಾತಿನಂತೆ ಪಾಂಡ್ಯಾ ವಿಕೆಟ್ ನಿಂದ ಆಫ್ ಸೈಡ್ ಬಾಲ್ ಎಸೆದರು. ಈ ವೇಳೆ ಬ್ಯಾಟಿಂಗ್ ಮಾಡುತ್ತಿದ್ದ ಶುವಾಗತ್ ಆ ಬಾಲ್ ಅನ್ನು  ಮಿಸ್ ಮಾಡಿಕೊಂಡರು. ಇದಕ್ಕೂ ಮೊದಲೇ ಗ್ಲೌಸ್ ತೆಗೆದು ಸಿದ್ಧವಾಗಿದ್ದ ಧೋನಿ ಬಾಲ್ ಹಿಡಿದು ರನ್ ಔಟ್ ಮಾಡಿದರು. ಆ ಮೂಲಕ ಆ ಪಂದ್ಯವನ್ನೂ ಭಾರತ ರೋಚಕವಾಗಿ ಜಯಿಸಿತ್ತು.

ಈ ಐದು ಪಂದ್ಯಗಳಲ್ಲಿ ಧೋನಿ ತೆಗೆದುಕೊಂಡ ನಿರ್ಧಾರಗಳು ಧೋನಿ ಅವರ ನಾಯಕತ್ವವನ್ನು ಬಿಂಬಿಸುತ್ತವೆ. ನಾಯಕತ್ವ ತ್ಯಜಿಸುವ ಧೋನಿ ನಿರ್ಧಾರದಿಂದ ಭಾರತೀಯ ಕ್ರಿಕೆಟ್​ನ ಯಶಸ್ವಿ ನಾಯಕತ್ವದ ಯುಗವೊಂದು  ಅಂತ್ಯಗೊಂಡಂತಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.