ಭಾರತ ಪ್ರವಾಸ: ಏಕದಿನ ಸರಣಿಗೆ ಆಸಿಸ್ ತಂಡ ಪ್ರಕಟ: ಮಾರ್ನಸ್‌ಗೆ ಸ್ಥಾನ

ಮುಂಬರುವ ಭಾರತ ಪ್ರವಾಸಕ್ಕೆ ಆಸ್ಟ್ರೇಲಿಯಾ ತಂಡವನ್ನು ಆಯ್ಕೆ ಮಾಡಲಾಗಿದ್ದು, ಟೆಸ್ಟ್ ಸ್ಪೆಷಲಿಸ್ಟ್ ಮಾರ್ನಸ್ ಗೆ ಏಕದಿನ ಸರಣಿಯಲ್ಲಿ ಸ್ಥಾನ ನೀಡಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಸಿಡ್ನಿ: ಮುಂಬರುವ ಭಾರತ ಪ್ರವಾಸಕ್ಕೆ ಆಸ್ಟ್ರೇಲಿಯಾ ತಂಡವನ್ನು ಆಯ್ಕೆ ಮಾಡಲಾಗಿದ್ದು, ಟೆಸ್ಟ್ ಸ್ಪೆಷಲಿಸ್ಟ್ ಮಾರ್ನಸ್ ಗೆ ಏಕದಿನ ಸರಣಿಯಲ್ಲಿ ಸ್ಥಾನ ನೀಡಲಾಗಿದೆ.

ಮುಂದಿನ ವರ್ಷ ಜನವರಿಯಲ್ಲಿ ಭಾರತದಲ್ಲಿ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿಗೆ ಕ್ರಿಕೆಟ್ ಆಸ್ಟ್ರೇಲಿಯಾ ತಂಡ ತನ್ನ 14 ಆಟಗಾರರ ತಂಡವನ್ನು ಪ್ರಕಟಿಸಿದೆ. ಪ್ರಸ್ತುತ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅಮೋಘ ಪ್ರದರ್ಶನ ತೋರುತ್ತಿರುವ ಮಾರ್ನಸ್‌ ಲಾಬುಶೇನ್‌ ಅವರಿಗೆ ಏಕದಿನ ಸರಣಿಗೆ ಅವಕಾಶ ನೀಡಲಾಗಿದೆ.

ಟೆಸ್ಟ್‌ ಕ್ರಿಕೆಟ್‌ಗೆ 2018ರ ಅಕ್ಟೋಬರ್‌ನಲ್ಲಿ ಪದಾರ್ಪಣೆ ಮಾಡಿರುವ ಮಾರ್ನಸ್‌ ಇದುವರೆಗೆ 12 ಪಂದ್ಯಗಳ 19 ಇನಿಂಗ್ಸ್‌ಗಳಲ್ಲಿ ಆಡಿದ್ದಾರೆ. ಇವುಗಳಲ್ಲಿ ಮೂರು ಶತಕ ಹಾಗೂ ಆರು ಅರ್ಧಶತಕಗಳಿದ್ದು 58.05ರ ಸರಾಸರಿಯಲ್ಲಿ 1,103 ರನ್ ಕಲೆಹಾಕಿದ್ದಾರೆ. ಮಾತ್ರವಲ್ಲದೆ ಈ ವರ್ಷ ಆಡಿರುವ 10 ಟೆಸ್ಟ್‌ 15 ಇನಿಂಗ್ಸ್‌ಗಳಿಂದ 1,022 ರನ್‌ ಗಳಿಸಿದ್ದು, 2019ರಲ್ಲಿ ಆಡಿದ ಟೆಸ್ಟ್‌ ಪಂದ್ಯಗಳಿಂದ ಸಾವಿರ ರನ್‌ ಗಳಿಸಿದ ಏಕೈಕ ಬ್ಯಾಟ್ಸ್‌ಮನ್‌ ಎನಿಸಿದ್ದಾರೆ. ಹೀಗಾಗಿ 2019ರ ಆರಂಭದಲ್ಲಿ ಐಸಿಸಿ ಟೆಸ್‌ ಬ್ಯಾಟ್ಸ್‌ಮನ್‌ಗಳ ರ‍್ಯಾಂಕಿಂಗ್‌ನಲ್ಲಿ 110ನೇ ಸ್ಥಾನದಲ್ಲಿದ್ದ ಮಾರ್ನಸ್‌, ಇದೀಗ 5ನೇ ಸ್ಥಾನಕ್ಕೆ ತಲುಪಿದ್ದಾರೆ.

2019ರ ವಿಶ್ವಕಪ್‌ಗೆ ತಂಡದಲ್ಲಿ ಆಡಿದ್ದ ಉಸ್ಮಾನ್‌ ಖ್ವಾಜಾ, ಶಾನ್‌ ಮಾರ್ಶ್‌, ಮಾರ್ಕಸ್‌ ಸ್ಟೋಯಿನಸ್‌, ನಾಥನ್‌ ಲಯನ್‌, ನಾಥನ್‌ ಕಾರ್ಟರ್‌ನೈಲ್‌, ಗ್ಲೇನ್‌ ಮ್ಯಾಕ್ಸ್‌ವೆಲ್‌ ಅವರಿಗೆ ಕೋಕ್‌ ನೀಡಲಾಗಿದ್ದು, ಗಾಯಾಳು ಜೇಸನ್‌ ಬೆಹ್ರನ್‌ಡ್ರಾಫ್‌ ಅವರನ್ನೂ ತಂಡದಿಂದ ಕೈಬಿಡಲಾಗಿದೆ. ಉಳಿದಂತೆ ನಾಯಕ ಆ್ಯರನ್‌ ಫಿಂಚ್‌, ಡೇವಿಡ್‌ ವಾರ್ನರ್‌, ಸ್ಟೀವ್‌ ಸ್ಮಿತ್‌ ಜೊತೆಗೆ ಮಾರ್ನಸ್‌ ಲಾಬುಶೇನ್‌ ತಂಡ ಸೇರಿಕೊಂಡಿದ್ದಾರೆ. ಅಲ್ಲದೆ ಆಷ್ಟನ್‌ ಟರ್ನರ್‌, ಪೀಟರ್‌ ಹ್ಯಾಂಡ್ಸ್‌ಕಂಬ್‌ ಹಾಗೂ ವಿಕೆಟ್‌ ಕೀಪರ್‌ ಅಲೆಕ್ಸ್‌ ಕಾರಿ, ಆ್ಯಡಂ ಜಂಪಾ, ಟರ್ನರ್‌, ಮಿಚೇಲ್‌ ಸ್ಟಾರ್ಕ್‌, ಪ್ಯಾಟ್ ಕಮಿನ್ಸ್‌, ಸೀನ್‌ ಅಬೋಟ್‌, ಜೋಸ್‌ ಹ್ಯಾಜಲ್‌ವುಡ್‌, ಕೇನ್‌ ರಿಚರ್ಡ್ಸನ್‌ ತಂಡ ಸೇರಿಕೊಂಡಿದ್ದಾರೆ.

ಶ್ರೀಲಂಕಾ ವಿರುದ್ಧ 3 ಪಂದ್ಯಗಳ ಟಿ20 ಸರಣಿಯನ್ನು ಕ್ಲೀನ್‌ ಸ್ವೀಪ್‌ ಮಾಡಿದ್ದ ಆಸಿಸ್‌, ಬಳಿಕ ಪಾಕ್‌ ವಿರುದ್ಧ 3 ಪಂದ್ಯಗಳ ಸರಣಿಯನ್ನು 2–0 ಅಂತರದಲ್ಲಿ ಗೆದ್ದಿತ್ತು.  ಭಾರತ ವಿರುದ್ಧ ಏಕದಿನ ಸರಣಿಯ ಮೊದಲ ಪಂದ್ಯವು ಜನವರಿ 14ರಂದು ಮುಂಬೈನಲ್ಲಿ ನಡೆಯಲಿದೆ. ಎರಡನೇ ಪಂದ್ಯ ಜ.17ರಂದು ರಾಜ್‌ಕೋಟ್‌ ಹಾಗೂ ಮೂರನೇ ಪಂದ್ಯ ಜ.19ರಂದು ಬೆಂಗಳೂರಿನಲ್ಲಿ ನಡೆಯಲಿದೆ.

ತಂಡ ಇಂತಿದೆ
ಆ್ಯರನ್‌ ಫಿಂಚ್‌ (ನಾಯಕ), ಡೇವಿಡ್‌ ವಾರ್ನರ್‌, ಸ್ಟೀವ್‌ ಸ್ಮಿತ್‌, ಮಾರ್ನಸ್‌ ಲಾಬುಶೇನ್‌, ಪ್ಯಾಟ್ ಕಮಿನ್ಸ್‌ (ಉಪನಾಯಕ), ಆಷ್ಟನ್‌ ಟರ್ನರ್‌, ಅಲೆಕ್ಸ್‌ ಕಾರಿ (ವಿಕೆಟ್‌ಕೀಪರ್‌), ಪೀಟರ್‌ ಹ್ಯಾಂಡ್ಸ್‌ಕಂಬ್‌, ಜೋಸ್‌ ಹ್ಯಾಜಲ್‌ವುಡ್‌, ಕೇನ್‌ ರಿಚರ್ಡ್ಸನ್‌, ಮಿಚೇಲ್‌ ಸ್ಟಾರ್ಕ್‌, ಆ್ಯಡಂ ಜಂಪಾ, ಸೀನ್‌ ಅಬೋಟ್‌, ಆಸ್ಟನ್‌ ಅಗರ್‌

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com