ಕಸ ಘಟಕ ವಿರುದ್ಧ ತೀವ್ರ ಪ್ರತಿಭಟನೆ

ಮಾಗಡಿ: ಬಿಬಿಎಂಪಿ ವ್ಯಾಪ್ತಿಯ ಕಸಕ್ಕೆ ಗೊರೂರು ಗ್ರಾಮವನ್ನು ತೊಟ್ಟಿಯಾಗಿಸಲು ಬಿಡುವುದಿಲ್ಲ ಎಂದು ಶಪಥ ಮಾಡಿರುವ ಸ್ಥಳೀಯರು ಸೋಮವಾರದಿಂದ ಪ್ರತಿಭಟನೆ ತೀವ್ರಗೊಳಿಸಿದ್ದರಿಂದ ಗುತ್ತಿಗೆ ಸಂಸ್ಥೆಯಾದ ಸತೆರೆಮ್ ಕಂಪೆನಿಯು ಘಟಕದ ಶಂಕುಸ್ಥಾಪನೆ ಕೈ ಬಿಟ್ಟಿದೆ.
ಗೊರೂರು ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಸೋಮವಾರ ಗುದ್ದಲಿಪೂಜೆ ನಡೆಯುತ್ತದೆಂಬ ಸುದ್ದಿ ಹರಡಿತ್ತು. ಈ ಹಿನ್ನೆಲೆಯಲ್ಲಿ ಗೊರೂರು ಸುತ್ತಮುತ್ತಲಿನ ಜನರು ಘಟಕಕ್ಕೆ ಗುರ್ತಿಸಿರುವ ಸ್ಥಳದಲ್ಲಿ ಮುಂಜಾನೆಯೇ ಜಮಾಯಿಸಿ, ರಸ್ತೆಯಲ್ಲಿ ಟಯರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ ಪ್ರಾರಂಭಿಸಿದರು. ಹೋರಾಟಕ್ಕೆ ಬೆಂಬಲ: ಯಾವುದೇ ಕಾರಣಕ್ಕೂ
ಬೆಂಗಳೂರು ಕಸಕ್ಕೆ ಗೊರೂರು ಗ್ರಾಮವನ್ನು ತಿಪ್ಪೆಯಾಗಿಸಲು ಬಿಡೆವು. ಪ್ರಾಣ ಹೋದರೂ ಸರಿಯೇ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎನ್ನುವ ಎಚ್ಚರಿಕೆಯ ಸಂದೇಶವನ್ನು ಹೋರಾಟಗಾರರು ರವಾನಿಸಿದರು.
ಹೋರಾಟಕ್ಕೆ ವ್ಯಾಪಕ ಬೆಂಬಲವೂ ವ್ಯಕ್ತವಾಗಿದೆ. ಘಟಕ ಸ್ಥಾಪನೆ ವಿರೋಧಿಸಿ ಕಳೆದ ವರ್ಷ ಪ್ರಾರಂಭವಾದ ಹೋರಾಟಕ್ಕೆ ಸ್ಥಳೀಯ ಬಂಡೆ ಮಠದ ಬಸವಲಿಂಗ ಸ್ವಾಮೀಜಿ ಧುಮುಕಿದ್ದರು. ಆ ಬಳಿಕ ಪಕ್ಷಾತೀತವಾಗಿ ಹಾಲಿ-ಮಾಜಿ ಜನಪ್ರತಿನಿಧಿಗಳು, ರಾಜಕೀಯ ಮುಖಂಡರು ಮತ್ತು ವಿವಿಧ ಸಂಘಟನೆಗಳು ಬೆಂಬಲಕ್ಕೆ ನಿಂತಿವೆ. ಬಸವಲಿಂಗ ಸ್ವಾಮೀಜಿ ಹೋರಾಟದ ಸಾರಥ್ಯ ವಹಿಸಿದ್ದಾರೆ. ಘಟಕ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ನಿರ್ದೇಶನ ನೀಡಿದೆ. ಇಷ್ಟಾಗಿಯೂ ಹೋರಾಟ ಕೈ ಬಿಡುವ ಪ್ರಶ್ನೆಯಿಲ್ಲ. ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಸ್ವಾಮೀಜಿ ಆಗ್ರಹಿಸಿದ್ದಾರೆ.
ಸುಪ್ರೀಂಗೆ ಮೇಲ್ಮನವಿ: ಕಸ ವಿಲೇವಾರಿ ಘಟಕ ಸ್ಥಾಪನೆಗೆ ಆಯ್ಕೆ ಮಾಡಿರುವ ಸ್ಥಳವು ತಿಪ್ಪಗೊಂಡನ ಹಳ್ಳಿ ಜಲಾಶಯದ ಕ್ಯಾಚ್ಮೆಂಟ್ ಪ್ರದೇಶ. ಆಸುಪಾಸಿನಲ್ಲಿ ಪವಿತ್ರ ದೇಗುಲಗಳಿವೆ. ಸುತ್ತಲೂ ದಲಿತರಿಗೆ ಸೇರಿದ ಕೃಷಿ ಭೂಮಿಯಿದೆ. ಇಂತಹ ಕಡೆ ಘಟಕ ಸ್ಥಾಪಿಸುವುದು ಸೂಕ್ತವಲ್ಲ ಎಂದು ನೆಲಮಂಗಲ ಶಾಸಕ ಡಾ.ಶ್ರೀನಿವಾಸಮೂರ್ತಿ ಒತ್ತಾಯಿಸಿದ್ದಾರೆ.
ಸರ್ಕಾರದ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ. ಈ ಪ್ರದೇಶದಲ್ಲಿ ಜನತೆಯ ಹಿತಾಸಕ್ತಿ ಮರೆತು, ಯಾವುದೇ ಕಾರಣಕ್ಕೂ ಕಸ ವಿಲೇವಾರಿ ಘಟಕ ಸ್ಥಾಪನೆಗೆ ಅವಕಾಶ ನೀಡುವು ದಿಲ್ಲ. ಈ ವಿಷಯದಲ್ಲಿ ಎಂತಹ ಹೋರಾಟಕ್ಕೂ ಸಿದ್ಧ ಎಂದು ಅವರು ಎಚ್ಚರಿಕೆ ನೀಡಿದರು.
ಮಾಜಿ ಶಾಸಕ ಬೆಂಬಲ: ರೈತರ ಭೂಮಿಯನ್ನ ಕಸದ ಗುಂಡಿ ಮಾಡಲು ಹೊರಟಿರುವ ರಾಜ್ಯ ಸರ್ಕಾರಕ್ಕೆ ಕಣ್ಣು ಕಿವಿ ಎರಡೂ ಇಲ್ಲ. ಜನತೆಯ ಹಿತಾಸಕ್ತಿ ಬಲಿಕೊಟ್ಟು, ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡಲೇಬೇಕೆಂದು ಸರ್ಕಾರ ಹಠಕ್ಕೆ ಬಿದ್ದಿರುವುದರಿಂದ ಈ ಭಾಗರದ ಜನರಲ್ಲಿ ಆತಂಕ ಮನೆ ಮಾಡಿದೆ ಎಂದು ಮಾಜಿ ಶಾಸಕ ಎಂ.ವಿ.ನಾಗರಾಜ್ ಟೀಕಿಸಿದರು.
ಗೊರೂರು ಬಳಿ ಕಸ ವಿಲೇವಾರಿ ಘಟಕ ಸ್ಥಾಪನೆಯ ನಿರ್ಧಾರದಿಂದ ಸರ್ಕಾರ ತಕ್ಷಣ ಹಿಂದೆ ಸರಿಯಬೇಕು.
ಇಲ್ಲವಾದಲ್ಲಿ ಈ ಭಾಗದ ಜನರೊಡಗೂಡಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ. ಅದರಿಂದಾಗುವ ಅನಾಹುತಕ್ಕೆ ಸರ್ಕಾರವೇ ಹೊಣೆ ಎಂದು ಅವರು ಹೇಳಿದರು. ಪ್ರತಿಭಟನಕಾರರನ್ನು ಉದ್ದೇಶಿಸಿ ಲಕ್ಕೇನಹಳ್ಳಿ ಗಂಗರಾಜು, ಜಿಪಂ ಸದಸ್ಯ
ರಂಗಸ್ವಾಮಯ್ಯ, ದಲಿತ ಮುಖಂಡ ನಾಗರಾಜು, ಗ್ರಾಪಂ ಸದಸ್ಯ ಶ್ರೀ ನಿವಾಸ್, ತಾಪಂ ಸದಸ್ಯೆ ಅನಸೂಯ ಕಾಂತರಾಜು, ಗುಡೇಮಾರನಹಳ್ಳಿ ಗೋಪಾಲ್, ಪ್ರಶಾಂತ್, ನೆಲಮಂಗಲ ಪ್ರಾಧಿಕಾರದ ಅಧ್ಯಕ್ಷ ಆನಂದ್ ಮತ್ತಿತರರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


