

ಬೆಂಗಳೂರು: ಚಾಲಕನಿಗೆ ಚಾಕು ತೋರಿಸಿ ಕಾರು ಕಳವು ಮಾಡಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಜಾಲಹಳ್ಳಿ ಪೊಲೀಸರು ರು.2 ಲಕ್ಷ ಮೌಲ್ಯದ ಕಾರನ್ನು
ವಶಪಡಿಸಿಕೊಂಡಿದ್ದಾರೆ.
ಆಂಧ್ರಹಳ್ಳಿ ಮುಖ್ಯರಸ್ತೆ ನಿವಾಸಿ ಸುರೇಶ್ (27) ಮತ್ತು ಹೆಗ್ಗನಹಳ್ಳಿ ಕ್ರಾಸ್ ನಿವಾಸಿ ಶಂಕರಮೂರ್ತಿ (23) ಬಂಧಿತ ಆರೋಪಿಗಳು. ಇವರು ನ.26 ರಂದು ಕಮ್ಮಗೊಂಡನಹಳ್ಳಿಯ ರಾಘವೇಂದ್ರ ಕಾಲೋನಿ ನಿವಾಸಿ ಸುರೇಶ್ ಬಾಬು ಅವರಿಗೆ ಚಾಕು ತೋರಿಸಿ ಅವರ ಮಾರುತಿ ಸ್ವಿಫ್ಟ್ ಡಿಸೈರ್ ಕಾರು ಹಾಗೂ ಮೊಬೈಲ್ ಫೋನ್‍ಗಳನ್ನು ಕಸಿದುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ಸುರೇಶ್ ಬಾಬು ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಉಬರ್ ಕ್ಯಾಬ್ ಕಂಪನಿಗೆ ಸುರೇಶ್ ಬಾಬು ಒಪ್ಪಂದದ ಮೇರೆಗೆ ತಮ್ಮ ಮಾರುತಿ ಸ್ವಿಫ್ಟ್ ಕಾರು ಬಿಟ್ಟಿದ್ದರು. ಅದಕ್ಕೆ ಅವರೇ ಚಾಲಕರಾಗಿದ್ದರು. ನ.26ರಂದು ಆರ್.ಟಿ.ನಗರದಲ್ಲಿ ಕೊನೆಯ ಟ್ರಿಪ್ ಮುಗಿಸಿ ಬಿಇಎಲ್ ಸರ್ಕಲ್ ಮೂಲಕ ಮನೆಗೆ ತೆರಳುತ್ತಿದ್ದರು. ಮಾರ್ಗದಲ್ಲಿ ಜಾಲಹಳ್ಳಿಯ ಕಾಳಿಂಗ್‍ರಾವ್ ಸರ್ಕಲ್ ನಲ್ಲಿ ಕಾರು ನಿಲ್ಲಿಸಿಕೊಂಡು ಮೊಬೈಲ್ ನಲ್ಲಿ ಸ್ನೇಹಿತರೊಂದಿಗೆ ಮಾತನಾಡುತ್ತಿದ್ದರು.
ಈ ವೇಳೆ ಬೈಕ್‍ನಲ್ಲಿ ಬಂದ ಇಬ್ಬರು ಆರೋಪಿಗಳು, ವಿಳಾಸ ಕೇಳುವ ನೆಪದಲ್ಲಿ ಸುರೇಶ್‍ಬಾಬು ಬಳಿಗೆ ಹೋಗಿ ಬಳಿಕ ಚಾಕು ತೋರಿಸಿ ಕಾರು ಹಾಗೂ ಮೊಬೈಲ್ ಫೋನ್‍ಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ದೂರು ದಾಖಲಿಸಿಕೊಂಡಿದ್ದ ಪೊಲೀಸರು, ಕಾರ್ಯಾಚರಣೆ ಕೈಗೊಂಡು ಆರೋಪಿಗಳ ನ್ನು ಬಂಧಿಸಿ ಕಾರು ಹಾಗೂ ಮೊಬೈಲ್ ಗಳನ್ನು ವಶಪಡಿಸಿಕೊಂಡಿದ್ದಾರೆ.