ಬೆಳಗ್ಗೆ ಅಪಹರಣ ಮಧ್ಯಾಹ್ನ ರಕ್ಷಣೆ

ಅಪಹರಣ ಪ್ರಕರಣ ಸಂಬಂಧ ಯಲಹಂಕ ಉಪನಗರ ಪೊಲೀಸರು ಮಿಂಚಿನ ಕಾರ್ಯಾಚರಣೆ ಮೂಲಕ ಅಪಹರಣಕ್ಕೆ ಒಳಗಾಗಿದ್ದ ವಿದ್ಯಾರ್ಥಿಯನ್ನು ರಕ್ಷಿಸಿದ ಘಟನೆ ಸೋಮವಾರ ನಡೆಯಿತು...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)
Updated on: 

ಬೆಂಗಳೂರು: ಅಪಹರಣ ಪ್ರಕರಣ ಸಂಬಂಧ ಯಲಹಂಕ ಉಪನಗರ ಪೊಲೀಸರು ಮಿಂಚಿನ ಕಾರ್ಯಾಚರಣೆ ಮೂಲಕ ಅಪಹರಣಕ್ಕೆ ಒಳಗಾಗಿದ್ದ ವಿದ್ಯಾರ್ಥಿಯನ್ನು ರಕ್ಷಿಸಿದ ಘಟನೆ ಸೋಮವಾರ ನಡೆಯಿತು.

ರಾಮಗೊಂಡನಹಳ್ಳಿಯ ನಾಗಾರ್ಜುನ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿರುವ ವೈದ್ಯನಾಥ್ ಹಾಗೂ ನಿತೀಶ್ ಎಂಬ ಸ್ನೇಹಿತರು ಬೆಳಗ್ಗೆ 7.50ರ ಸುಮಾರಿಗೆ ಬೈಕ್‍ನಲ್ಲಿ ಕಾಲೇಜಿಗೆ ಹೋಗುತ್ತಿದ್ದರು. ಈ ವೇಳೆ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಹಾರೋಹಳ್ಳಿ ಕೆರೆ ಏರಿ ಮೇಲೆ ವಿದ್ಯಾರ್ಥಿಗಳ ಬೈಕ್ ತಡೆದು ವೈದ್ಯನಾಥ್ ಮುಖಕ್ಕೆ ಹಲ್ಲೆ ನಡೆಸಿದ್ದರು. ಬಳಿಕ ನಿತೀಶ್‍ನನ್ನು ಸ್ಥಳದಲ್ಲೇ ಬಿಟ್ಟು ಬೈಕ್ ಹಾಗೂ ಮೊಬೈಲ್ ಫೋನ್‍ನೊಂದಿಗೆ ವೈದ್ಯನಾಥ್‍ನನ್ನು ಅಪಹರಿಸಿ ಪರಾರಿಯಾಗಿದ್ದರು. ಈ ಸಂದರ್ಭದಲ್ಲಿ ನಿತೀಶ್ ದುಷ್ಕರ್ಮಿಗಳ ಕಾರಿನ ನೋಂದಣಿ ಸಂಖ್ಯೆ ಬರೆದುಕೊಂಡಿದ್ದರು. ನಂತರ ಪೊಲೀಸ್ ಠಾಣೆಗೆ ತೆರಳಿ ಘಟನೆ ಸಂಬಂಧ ದೂರು ದಾಖಲಿಸಿದ್ದರು.

ಸಹಾಯವಾಯ್ತು ಸಂಖ್ಯೆ: ದೂರಿನ ಮೇರೆಗೆ ಶೀಘ್ರ ಕಾರ್ಯಾಚರಣೆಗೆ ಮುಂದಾದ ಪೊಲೀಸರು, ಕಾರಿನ ನೋಂದಣಿ ಸಂಖ್ಯೆ ಆಧಾರದ ಮೇಲೆ ಕಾರಿನ ಮಾಲೀಕನನ್ನು ಪತ್ತೆ ಹಚ್ಚಿದ್ದರು. ಮಾಲೀಕ ತನ್ನ ಕಾರನ್ನು ಬಾಡಿಗೆ ಕೇಂದ್ರಕ್ಕೆ ಬಿಟ್ಟಿರುವುದಾಗಿ ಹೇಳಿದ್ದರು. ಕೂಡಲೇ ಆ ಕೇಂದ್ರಕ್ಕೆ ತೆರಳಿದ ಪೊಲೀಸರು, ಕಾರನ್ನು ಬಾಡಿಗೆ ಪಡೆದಿದ್ದ ವ್ಯಕ್ತಿಯ ಮೊಬೈಲ್ ಫೋನ್ ಸಂಖ್ಯೆ ಸಂಗ್ರಹಿಸಿದ್ದರು. ಬಳಿಕ ಮೊಬೈಲ್ ಸಂಖ್ಯೆ ಟವರ್ ಲೊಕೇಶನ್ ಆಧರಿಸಿ ಹೆಸರುಘಟ್ಟ ಬಸ್ ನಿಲ್ದಾಣ ಬಳಿ ಕಾರನ್ನು ಪತ್ತೆ ಮಾಡಿದರು. ನಂತರ ಕಾರು ಬಾಡಿಗೆ ಪಡೆದಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದರು. ಈತ ನೀಡಿದ ಮಾಹಿತಿ ಮೇರೆಗೆ ಕೋಡಿಹಳ್ಳಿ ಗ್ರಾಮದ ನೀಲಗಿರಿ ತೋಪಿನಲ್ಲಿ ಕೈ ಕಾಲು ಕಟ್ಟಿ ಇರಿಸಿದ್ದ ವಿದ್ಯಾರ್ಥಿ ವೈದ್ಯನಾಥ್ ನನ್ನು ರಕ್ಷಿಸಿರುವ ಪೊಲೀಸರು, ದುಷ್ಕರ್ಮಿಗಳ ಪತ್ತೆಗೆ ಶೋಧ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com