

ನವದೆಹಲಿ: ಮಾರಕ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ದೇಶದಲ್ಲಿ ಗಣನೀಯವಾಗಿ ಏರಿಕೆಯಾಗುತ್ತಿರುವಂತೆಯೇ ಇತ್ತ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ 24 ಗಂಟೆಗಳಲ್ಲಿ ದೇಶಾದ್ಯಂತ 5,25,689 ಕೋವಿಡ್-19 ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಮಾಹಿತಿ ನೀಡಿದೆ.
ಈ ಬಗ್ಗೆ ಐಸಿಎಂಆರ್ ಮಾಹಿತಿ ನೀಡಿದ್ದು, ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 5,25,689 ಕೋವಿಡ್-19 ಪರೀಕ್ಷೆಗಳನ್ನು ನಡೆಸಲಾಗಿದ್ದು, ಆ ಮೂಲಕ ದೇಶದಲ್ಲಿ ಈ ವರೆಗೂ ಅಂದರೆ ಜುಲೈ.31ರವರೆಗೂ 1,93,58,659 ಕೋವಿಡ್-19 ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಮಾಹಿತಿ ನೀಡಿದೆ.
ಹೊಸ ಕೊರೋನಾ ಕೇಸುಗಳ ಪ್ರಮಾಣದಲ್ಲಿ ಶನಿವಾರ ಮತ್ತೊಂದು ದಾಖಲೆ ನಿರ್ಮಾಣವಾಗಿದೆ. ಕಳೆದ 24 ಗಂಟೆಗಳಲ್ಲಿ ದೇಶದಾದ್ಯಂತ 57,117 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದ್ದು, ಇದು ಈವರೆಗಿನ ದೈನಂದಿನ ದಾಖಲೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 16,95,988ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಮತ್ತೊಂದೆಡೆ ಒಂದೇ ದಿನ 764 ಮಂದಿ ಸಾವನ್ನಪ್ಪಿದ್ದು, ಈ ವರೆಗೆ ಸೋಂಕಿಗೆ ಬಲಿಯಾದವರ ಸಂಖ್ಯೆ 36,511ನ್ನು ಮುಟ್ಟಿದೆ. ಇದೇ ವೇಳೆ 16,95,988 ಮಂದಿ ಸೋಂಕಿತರ ಪೈಕಿ 10,94,374 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದು, ದೇಶದಲ್ಲಿನ್ನೂ 5,65,103 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ.