ಆಸ್ಟ್ರೇಲಿಯಾದ ಸಿಡ್ನಿಯಲ್ಲಿರುವ ಎಸ್ ಸಿಜಿ ಕ್ರೀಡಾಂಗಣದಲ್ಲಿ ಆರಂಭವಾಗಿರುವ ಅಭ್ಯಾಸ ಪಂದ್ಯದಲ್ಲಿ ಇಂದು ಬೆಳಗ್ಗೆ ಪೃಥ್ವಿ ಶಾ ಗಾಯಗೊಂಡಿದ್ದರು. ಆಸ್ಟ್ರೇಲಿಯಾ ಎಲೆವನ್ ತಂಡದ ಆರಂಭಿಕ ಆಟಗಾರ ಮ್ಯಾಕ್ಸ್ ಬ್ರಾಂಟ್ ಅವರು ಸಿಡಿಸಿದ ಚೆಂಡನ್ನು ಪೃಥ್ವಿ ಶಾ ಬೌಂಡರಿ ಗೆರೆ ಬಳಿ ಹಿಡಿಯಲು ಜಂಪ್ ಮಾಡಿದರು. ಈ ವೇಳೆ ಕ್ಯಾಚ್ ಹಿಡಿಯುವಲ್ಲಿ ಯಶಸ್ವಿಯಾದರೂ ಅವರ ಹಿಮ್ಮಡಿಗೆ ಬಲವಾದ ಗಾಯವಾಯಿತು. ಕನಿಷ್ಠ ಪಕ್ಷ ಎದ್ದು ನಿಲ್ಲಲೂ ಸಾಧ್ಯವಾಗದೇ ಪೃಥ್ವಿ ಶಾ ಕಷ್ಟುಪಟ್ಟರು. ಈ ವೇಳೆ ಮೈದಾನಕ್ಕೆ ಆಗಮಿಸಿದ ಫಿಸಿಯೋಗಳು ಅವರನ್ನು ಎತ್ತಿಕೊಂಡು ಹೋಗಿ ಪ್ರಥಮ ಚಿಕಿತ್ಸೆ ನೀಡಿದರು. ಬಳಿಕ ಅವರನ್ನು ಆಸ್ಪತ್ರೆ ದಾಖಲು ಮಾಡಲಾಯಿತು. ಶಾಗೆ ಕಾಲಿನ ಸ್ಕ್ಯಾನಿಂಗ್ ಮಾಡಿಸಲಾಗಿದ್ದು, ಅದರ ವರದಿ ಇನ್ನೂ ಲಭ್ಯವಾಗಿಲ್ಲ.