

ಹೈದರಾಬಾದ್: ಐಪಿಎಲ್ 2026ರ ಟೂರ್ನಿಯಲ್ಲಿ ಮೊದಲ ಗೆಲುವು ಕಂಡ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾಲೀಕ ಸಂಜೀವ್ ಗೋಯೆಂಕಾ ತಂಡದ ನಾಯಕ ರಿಷಬ್ ಪಂತ್ ರನ್ನು ಬಿಗಿದಪ್ಪಿದ ಘಟನೆ ನಡೆದಿದೆ.
ಹೈದರಾಬಾದ್ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026 (IPL 2026)ರ 10ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸಿದ ಲಕ್ನೋ ಸೂಪರ್ಜೈಂಟ್ಸ್ ಈ ಆವೃತ್ತಿಯಲ್ಲಿ ತನ್ನ ಮೊದಲ ಗೆಲುವು ದಾಖಲಿಸಿತು.
ಸನ್‌ರೈಸರ್ಸ್ ನೀಡಿದ 157 ರನ್ಗಳ ಗುರಿಯನ್ನು ಬೆನ್ನಟ್ಟಲು ಸಾಕಷ್ಟು ಕಷ್ಟಪಟ್ಟ ಲಕ್ನೋ, ನಾಯಕ ರಿಷಭ್ ಪಂತ್ ಅವರ ತಾಳ್ಮೆಯ ಆಟದಿಂದಾಗಿ ಕೊನೆಯ ಓವರ್ನಲ್ಲಿ ಗೆಲುವು ದಾಖಲಿಸಿತು.
ಕೊನೆಯ ಓವರ್ ವರೆಗೂ ರೋಚಕತೆಯಿಂದ ಕೂಡಿದ ಈ ಪಂದ್ಯವನ್ನು ಲಕ್ನೋ ತಂಡ ಗೆಲ್ಲುತ್ತಿದ್ದಂತೆ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಅವರು ತುಂಬಾ ಭಾವುಕರಾಗಿ ಆನಂದಭಾಷ್ಪ ಹರಿಸಿದ್ದು ಕ್ಯಾಮೆರಾದಲ್ಲಿ ಸೆರೆಯಾಗಿದೆ.
ತಂಡದ ಗೆಲುವನ್ನು ಚಪ್ಪಾಳೆ ತಟ್ಟುತ್ತ ಸಂಜೀವ್ ಗೋಯೆಂಕಾ ಸಂಭ್ರಮಿಸಿದರು. ಇದೀಗ ಅದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮೈದಾನದಲ್ಲೇ ರಿಷಬ್ ಪಂತ್ ಬಿಗಿದಪ್ಪಿದ ಸಂಜೀವ್ ಗೋಯೆಂಕಾ
ಇನ್ನು ಪಂದ್ಯ ಮುಕ್ತಾಯವಾಗುತ್ತಲೇ ಮೈದಾನಕ್ಕೆ ಧಾವಿಸಿದ ಸಂಜೀವ್ ಗೋಯೆಂಕಾ, ಲಕ್ನೋ ತಂಡದ ನಾಯಕ ರಿಷಬ್ ಪಂತ್ ರನ್ನು ಆಲಂಗಿಸಿಕೊಂಡು ಅವರ ಆಟವನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಈ ವೇಳೆ ಪಂತ್ ಕೂಡ ಗೋಯೆಂಕಾ ಅವರ ಮಾತಿಗೆ ನಕ್ಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಇದಕ್ಕೂ ಮೊದಲು ಅಂದರೆ ಲಕ್ನೋ ತಂಡದ ಆರಂಭಿಕ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಪಂದ್ಯ ಸೋತ ಬಳಿಕ ಮೈದಾನದಲ್ಲಿ ನಾಯಕ ರಿಷಭ್ ಪಂತ್ ಅವರನ್ನು ಸಂಜಯ್ ಗೋಯೆಂಕಾ ತರಾಟೆಗೆ ತೆಗೆದುಕೊಂಡಿದ್ದರು. ಈ ವಿಚಾರಕ್ಕೆ ನೆಟ್ಟಿಗರು ಗೋಯೆಂಕಾ ವಿರುದ್ಧ ಸಿಟ್ಟು ಹೊರಹಾಕಿದ್ದರು. ಇದು ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು.
Advertisement